ರೋಮ್: ಬಡದೇಶಗಳಲ್ಲಿ ಕುಟುಂಬ ಮತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಗ್ರಾಮೀಣ ಭಾಗದ ಮಹಿಳೆಯರು ಹವಾಮಾನ ಬದಲಾವಣೆಯಿಂದ ಹೆಚ್ಚು ಸಂಕಷ್ಟ ಅನುಭವಿಸುತ್ತಾರೆ. ಸಂಕಷ್ಟದ ಸಮಯದಲ್ಲಿ ಅವರು ಬೇರೆ ಆದಾಯದ ಮೂಲಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುವ ವೇಳೆ ತಾರತಮ್ಯಕ್ಕೂ ಒಳಗಾಗುತ್ತಾರೆ ಎಂಬುದು ಈಚೆಗೆ ನಡೆಸಿರುವ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಈ ಸಂಗತಿಯನ್ನು ಎಚ್ಚರಿಕೆಯ ಗಂಟೆಯೆಂದು ಪರಿಗಣಿಸಬೇಕು ಎಂದು ವಿಶ್ವಸಂಸ್ಥೆ ಹೇಳಿದೆ.
ಆಹಾರ ಮತ್ತು ಕೃಷಿಗೆ ಸಂಬಂಧಿಸಿದ 'ದಿ ಅನ್‌ಜಸ್ಟ್ ಕ್ಲೈಮ್ಯಾಟ್' ಎಂಬ ಸಂಸ್ಥೆಯು ಈ ಕುರಿತು ವರದಿ ಪ್ರಕಟಿಸಿದ್ದು, ವಿಶ್ವಸಂಸ್ಥೆ ಅದನ್ನು ಉಲ್ಲೇಖಿಸಿ ಎಚ್ಚರಿಕೆ ನೀಡಿದೆ.
ಉಷ್ಣ ಮಾರುತವಿರುವ ಸಂದರ್ಭದಲ್ಲಿ ಕುಟುಂಬ ನಿರ್ವಹಿಸುವ ಗ್ರಾಮೀಣ ಪ್ರದೇಶದ ಮಹಿಳೆಯರು ಅದೇ ಪ್ರದೇಶದ ಪುರುಷರಿಗೆ ಹೋಲಿಸಿದರೆ ಸರಾಸರಿ ಶೇ 8ರಷ್ಟು ಆದಾಯವನ್ನು ಕಳೆದುಕೊಳ್ಳುತ್ತಾರೆ. ಪ್ರವಾಹದ ಸಂದರ್ಭದಲ್ಲಿ ಶೇ 3ರಷ್ಟು ಆದಾಯವನ್ನು ಕಳೆದುಕೊಳ್ಳುತ್ತಾರೆ ಎಂದು ವರದಿ ತಿಳಿಸಿದೆ.
ಒಂದು ಬಡ ದೇಶದ ನಿವ್ವಳ ತಲಾ ಆದಾಯವು ಉಷ್ಣ ಮಾರುತದ ಸಂದರ್ಭದಲ್ಲಿ ₹6,881 ಮತ್ತು ಪ್ರವಾಹದ ಸಂದರ್ಭದಲ್ಲಿ ₹2,901ಕ್ಕೆ ಇಳಿಕೆಯಾಗುತ್ತದೆ. ಇದರಿಂದ ಮಹಿಳೆಯರ ಆದಾರಕ್ಕೆ ಇನ್ನೂ ಹೆಚ್ಚು ಪೆಟ್ಟು ಬೀಳುತ್ತದೆ ಎಂದು ವರದಿ ಹೇಳಿದೆ.
ಕೃಷಿ ಕ್ಷೇತ್ರದ ಉತ್ಪಾದನಾ ಸಾಮರ್ಥ್ಯ, ಮಹಿಳೆ ಹಾಗೂ ಪುರಷರ ವೇತನದಲ್ಲಿರುವ ತಾರತಮ್ಯವನ್ನು ಸರಿಪಡಿಸದಿದ್ದರೆ, ಮುಂದಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ಆದಾಯದ ಅಂತರ ಮತ್ತಷ್ಟು ಹೆಚ್ಚಾಗಲಿದೆ ಎಂದೂ ವರದಿ ಬೊಟ್ಟುಮಾಡಿದೆ.
ಜಾಗತಿಕವಾಗಿ ಮತ್ತು ರಾಷ್ಟ್ರಮಟ್ಟದಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಆರ್ಥಿಕ ಸಂಪನ್ಮೂಲವನ್ನು ಗಣನೀಯವಾಗಿ ಮೀಸಲಿರಿಸುವುದು ಮತ್ತು ನಿಯಮ ರೂಪಿಸುವ ಕೆಲಸ ತುರ್ತಾಗಿ ನಡೆಯಬೇಕು ಎಂದು ವರದಿ ಒತ್ತಿಹೇಳಿದೆ.