ಕಾಜಿರಂಗ: ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳ್ಳಬೇಟೆ ವಿರೋಧಿ ಮಹಿಳಾ ತಂಡದ ಸದಸ್ಯರು ವನ್ಯಜೀವಿಗಳು, ಜೀವವೈವಿದ್ಯಧ್ಯದ ಸಂರಕ್ಷಣೆಯ ನೇತೃತ್ವ ವಹಿಸಿದ್ದಾರೆ. ಹಚ್ಚ ಹಸಿರು ವಸ್ತ್ರ ಧರಿಸಿ, ಹೆಗಲಲ್ಲಿ ಬಂದೂಕು ನೇತುಹಾಕಿಕೊಂಡು ಹಗಲು ರಾತ್ರಿ ಎನ್ನದೆ ಜೀವ ವೈವಿಧ್ಯದ ರಕ್ಷಣೆಗೆ ಪಣ ತೊಟ್ಟಿದ್ದಾರೆ.
'ಕಿಂಗ್ ಕೋಬ್ರಾ ಕ್ಯಾಂಪ್'ನ ಆರು ಮಂದಿ 2023ರಲ್ಲಿಯೇ ಕಾರ್ಯಾರಂಭ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸದ್ಯ ಉದ್ಯಾನದಲ್ಲಿ ಫಾರೆಸ್ಟ್ ಗಾರ್ಡ್, ಫಾರೆಸ್ಟರ್‌ಗಳು ಹಾಗೂ ಘೇಂಡಾಮೃಗ ರಕ್ಷಣಾ ಪಡೆಯ ಸಿಬ್ಬಂದಿ ಸೇರಿ ಸೇರಿ 54 ಮಹಿಳೆಯರು ವನ್ಯ ಸಂಪತ್ತಿನ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ. 'ಕಾಜಿರಂಗದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ' ಎಂದು ಉದ್ಯಾನವನದ ನಿರ್ದೇಶಕಿ ಸೊನಾಲಿ ಘೋಷ್ ತಿಳಿಸಿದ್ದಾರೆ.
'ಅಸ್ಸಾಂ ಅರಣ್ಯ ಇಲಾಖೆಯು 2023ರಲ್ಲಿ 300 ಯುವತಿಯರು ಸೇರಿದಂತೆ 2,500 ಸಿಬ್ಬಂದಿಯನ್ನು ನೇಮಕ ಮಾಡಿತ್ತು. ಈ ಮಹಿಳೆಯರು ಅತ್ಯುತ್ಸಾಹದಿಂದ ಕೆಲಸ ಮಾಡುತ್ತಾರೆ. ಪ್ರವಾಸಿಗರು ಮತ್ತು ಸಮುದಾಯದೊಂದಿಗಿನ ಮಾತುಕತೆ ವೇಳೆ ಪ್ರಮುಖ ಪಾತ್ರವಹಿಸಿ, ನಮಗೆ ಬೆಂಬಲವಾಗಿದ್ದಾರೆ. ಅವರು ಪುರುಷ ಸಿಬ್ಬಂದಿಯಂತೆಯೇ ಗಸ್ತು ತಿರುಗುವುದು ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿದ್ದಾರೆ' ಎಂದು ಹೇಳಿದರು.
ಫಾರೆಸ್ಟ್ ಗಾರ್ಡ್ ಪ್ರಿಯಾಂಕಾ ಭರಾಲಿ, 'ಅವರ ಕರ್ತವ್ಯ ಸಮಯವು ಬೆಳಿಗ್ಗೆ ಏಳರಿಂದ ಆರಂಭವಾಗುತ್ತದೆ. ಸಂಜೆ 6 ಗಂಟೆ ನಂತರ ಕಾಲ್ನಡಿಗೆ ಅಥವಾ ಆನೆಗಳ ಮೂಲಕ ಗಸ್ತು ತಿರುಗುತ್ತಾರೆ' ಎಂದು ಹೇಳಿದರು.
'ಬೆದರಿಕೆ ಇರುವ ಪ್ರದೇಶಗಳಿಗೆ ಭೇಟಿ ನೀಡುತ್ತೇವೆ. ಪ್ರಾಣಿಗಳು ಅಕ್ಕಪಕ್ಕದ ಪ್ರದೇಶಗಳಿಗೆ ಹೋಗದಂತೆ ಎಚ್ಚರವಹಿಸುತ್ತೇವೆ. ಈ ಮೂಲಕ ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಯತ್ನಿಸುತ್ತೇವೆ ಎಂದೂ ಹೇಳಿದರು.