ತಿರುವನಂತಪುರಂ: ಪ್ಲಸ್ ಒನ್ ವಿದ್ಯಾರ್ಥಿಗಳಿಂದ 240 ರೂ., ಪ್ಲಸ್ ಟು ವಿದ್ಯಾರ್ಥಿಗಳಿಂದ 270 ರೂ.ಪರೀಕ್ಷಾ ಶುಲ್ಕ ಪೀಕಿಸಿದ್ದರೂ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವ ಶಿಕ್ಷಕರಿಗೆ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲ.
ಕಳೆದ ವರ್ಷದ ಹೈಯರ್ ಸೆಕೆಂಡರಿ ಮೌಲ್ಯಮಾಪನದಲ್ಲಿ ಸುಮಾರು 21,000 ಶಿಕ್ಷಕರು ಭಾಗವಹಿಸಿದ್ದರು. ಈ ಶಿಕ್ಷಕರಿಗೆ ಸರ್ಕಾರ 11.75 ಕೋಟಿ ರೂ.ನೀಡಲು ಬಾಕಿಯಿದೆ. ಈ ವರ್ಷ ಹೈಯರ್ ಸೆಕೆಂಡರಿ ಮೌಲ್ಯಮಾಪನ ಮುಗಿದರೂ ಹಣ ಪಾವತಿಯಾಗಿಲ್ಲ ಎನ್ನುತ್ತಾರೆ ಶಿಕ್ಷಕರು.
ಆರ್ಥಿಕ ವರ್ಷ ಮುಗಿಯುತ್ತಿದ್ದಂತೆ ಶಿಕ್ಷಕರಿಗೆ ಹಣ ಸಿಗುವುದೇ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಶಿಕ್ಷಕರಿಗೆ ಪ್ರತಿ ಪರೀಕ್ಷಾ ಪತ್ರಿಕೆಗೆ 8.50 ರೂ.ನೀಡಬೇಕು. ದಿನಕ್ಕೆ 30 ಪೇಪರ್‍ಗಳನ್ನು ಮೌಲ್ಯಪಾಪನಗೈಯ್ಯಬೇಕು. ಈ ಮೊತ್ತದ ಜೊತೆಗೆ ಕ್ಯಾಂಪ್ ಡಿಎ ಕೂಡ ದೊರೆಯಲಿದೆ. ಪರೀಕ್ಷೆ ಪತ್ರಿಕೆ ಮೌಲ್ಯಮಾಪನಕ್ಕೆ ಬರೋಬ್ಬರಿ 30 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಲಾಗಿದ್ದು, ಈಗಾಗಲೇ 20 ಕೋಟಿ ರೂ.ಗಳನ್ನು ನೀಡಲಾಗಿದೆ ಎಂಬುದು ಸರ್ಕಾರ ನೀಡಿರುವ ವಿವರಣೆ. ಆದರೆ ಆ ಹಣ ಏನಾಯಿತೆಂಬ ಬಗ್ಗೆ ಇನ್ನಷ್ಟೇ ಮೌಲ್ಯಮಾಪನ ಮಾಡಬೇಕೇನೊ?
ಹಣಕಾಸು ಇಲಾಖೆ ಬಾಕಿ ಹಣ ಮಂಜೂರು ಮಾಡಿದ್ದು, ಹಣ ಪಾವತಿಗೆ ಹೆಚ್ಚು ವಿಳಂಬವಾಗುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ.