ಹೈದರಾಬಾದ್: ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಹೈದರಾಬಾದ್‌ನ ಮೊಹಮ್ಮದ್ ಅಫ್ಸಾನ್ ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ಒಪ್ಪದ ಅವರ ಸಹೋದರ ಮೊಹಮ್ಮದ್ ಇಮ್ರಾನ್, ವಸ್ತುಸ್ಥಿತಿ ಅರಿಯಲು ರಷ್ಯಾಕ್ಕೆ ಪ್ರಯಾಣಿಸಲು ಬಯಸಿದ್ದಾರೆ.
ಅಫ್ಸಾನ್ ಹಾಗೂ ನಾರಾಯಣಪೇಟೆಯ ಮೊಹಮ್ಮದ್ ಸೂಫಿಯಾನ್ ಎಂಬುವವರು ರಷ್ಯಾ ಸೇನೆಯಲ್ಲಿ ಸಹಾಯಕರಾಗಿ ಕೆಲಸ ಮಾಡಲು ತೆರಳಿದ್ದರು.
ಇದರಲ್ಲಿ ಅಫ್ಸಾನ್ ಮೃತಪಟ್ಟಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಿಬ್ಬಂದಿಯೊಬ್ಬರು ಬುಧವಾರ ಅಫ್ಸಾನ್ ಕುಟುಂಬ ಸದಸ್ಯರಿಗೆ ತಿಳಿಸಿದ್ದರು.
ಅಫ್ಸಾನ್ ಅವರ ಮೃತದೇಹವನ್ನು ಹುಟ್ಟೂರಿಗೆ ತರಲು ಕ್ರಮಕೈಗೊಂಡಿರುವುದಾಗಿ ರಷ್ಯಾದಲ್ಲಿರುವ ಭಾರತದ ರಾಯಭಾರಿ ಕಚೇರಿಯ ಅಧಿಕಾರಿಗಳು ಹೇಳಿದ್ದರು.
'ನಾನು ರಾಯಭಾರ ಕಚೇರಿಯ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಸಹೋದರ ಮೃತಪಟ್ಟಿರುವುದನ್ನು ನಾನು ನಂಬುವುದಿಲ್ಲ. ಗುರುತು ಪತ್ತೆಹಚ್ಚುವಲ್ಲಿ ಲೋಪವಾಗಿರುವ ಸಾಧ್ಯತೆ ಇದೆ. ಅಫ್ಸಾನ್ ಬದುಕಿರುವುದಾಗಿ ಅವನನ್ನು ರಷ್ಯಾಕ್ಕೆ ಕರೆದೊಯ್ದಿರುವ ಏಜೆಂಟರು ಹೇಳಿದ್ದಾರೆ. ರಷ್ಯಾಕ್ಕೆ ಪ್ರಯಾಣಿಸಲು ನನಗೆ ರಾಯಭಾರ ಕಚೇರಿ ಸಹಾಯ ಮಾಡಬೇಕು' ಎಂದು ಇಮ್ರಾನ್ ಹೇಳಿದರು.