ಕಾಸರಗೋಡು: ಜಿಲ್ಲೆಯ ನಾನಾ ಶಿವ ದೇವಾಲಯಗಳಲ್ಲಿ ಶಿವರಾತ್ರಿ ಮಹೋತ್ಸವ ಮಾ. 8ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಕಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ತ್ರಿಕ್ಕನ್ನಾಡ್ ತ್ರಯಂಬಕೇಶ್ವರ ದೇವಸ್ಥಾನ, ವರ್ಕಾಡಿ ಬಾಕ್ರಬೈಲು ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನ, ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ, ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶಿರಿಯ ಶ್ರೀ ಶಂಕರನಾರಾಯಣ ದೇವಸ್ಥಾನ, ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ, ಪುತ್ತಿಗೆ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಶಿವಕ್ಷೇತ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪೆರ್ಲ ಬಜಕೂಡ್ಲು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಮಹಾಲಿಂಗೇಶ್ವರ ಭಜನಾಸಂಘದ 39ನೇ ವಾರ್ಷಿಕೋತ್ಸವ ಮತ್ತು ಶಿವರಾತ್ರಿ ಭಜನೆ ಮಾ. 8ರಂದು ನಡೆಯಲಿದೆ. ಸಂಜೆ 6.39ಕ್ಕೆ ದೀಪ ಪ್ರತಿಷ್ಠೆ ನಡೆಯುವುದು. ನಂತರ ವಿವಿಧ ಭಜನಾತಂಡಗಳಿಂದ ಭಜನೆ ನಡೆಯುವುದು. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ 8ರಂದು ಬೆಳಗ್ಗೆ ಉಷ:ಪೂಜೆಯ ನಂತರ ವಿವಿಧ ಭಜನಾ ತಂಡಗಳಿಂದ ಸಂಜೆ 6ರ ವರೆಗೆ ಉದಯಾಸ್ತಮಾನ ಭಜನಾಸೇವೆ ನಡೆಯುವುದು. ಸಂಜೆ 7ಕ್ಕೆ ಶಿವಪಂಚಾಕ್ಷರೀ ಜಪ, ನಂತರ ಶ್ರೀ ದೇವರ ಉತ್ಸವಬಲಿ, ರಜಾಂಗಣ ಪ್ರಸಾದ ನಡೆಯುವುದು.