ತಿರುವನಂತಪುರ : ವಯನಾಡ್ ಜಿಲ್ಲೆಯ ಕೇರಳ ವಶು ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ವಿದ್ಯಾರ್ಥಿಯೋರ್ವರು ಸಾವನ್ನಪ್ಪಿರುವ ಕುರಿತಂತೆ ನಡೆದ ಪ್ರತಿಭಟನೆ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆ ನಡೆಸಿರುವುದರಿಂದ ತಿರುವನಂತಪುರದ ಕೇಂದ್ರ ಭಾಗದಲ್ಲಿರುವ ಕೇರಳ ಕಾರ್ಯಾಲಯದ ಮುಖ್ಯ ದ್ವಾರ ಬುಧವಾರ ರಣಾಂಗಣವಾಗಿ ಮಾರ್ಪಟ್ಟಿತು.
ಕಾಂಗ್ರೆಸ್, ಅದರ ಯುವ ಹಾಗೂ ಮಹಿಳಾ ಘಟಕಗಳು, ಐಯುಎಂಎಲ್ ನ ವಿದ್ಯಾರ್ಥಿ ಘಟಕ ಹಾಗೂ ಆಮ್ ಆದ್ಮಿ ಪಕ್ಷ ಇಲ್ಲಿನ ಸೆಕ್ರೇಟರಿಯೇಟ್ ಗೆ ರ್ಯಾಲಿ ನಡೆಸಿತು ಹಾಗೂ ಇಲ್ಲಿನ ಎಂ.ಜಿ. ರಸ್ತೆಯ ಮುಂಭಾಗ ಇರುವ ಅದರ ಮುಖ್ಯ ದ್ವಾರಕ್ಕೆ ಮುತ್ತಿಗೆ ಹಾಕಿತು.
ಆರಂಭದಲ್ಲಿ ಕಾರ್ಯಾಲಯದ ಮುಂಭಾಗ ಅಳವಡಿಸಲಾಗಿದ್ದ ಬ್ಯಾರಿಕೇಡ್ ಗಳ ಮುಂದೆ ಐಯುಎಂಎಲ್ ವಿದ್ಯಾರ್ಥಿ ಘಟಕ, ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್ (ಎಂಎಸ್‌ಎಫ್)ನ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅನಂತರ ಅದರ ಎದುರು ಇರುವ ಎಂಜಿ ರಸ್ತೆಯ ಅರ್ಧ ಭಾಗದಲ್ಲಿ ವಾಹನಗಳ ಸಂಚಾರ ತಡೆದರು. ಅನಂತರ ಅಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆಗೆ ಇಳಿದರು.
ಈ ಸಂದರ್ಭ ಅವರೊಂದಿಗೆ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸೇರಿದರು. ಪ್ರತಿಭಟನಕಾರರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದ್ದು, ಪೊಲೀಸರ ವಿರುದ್ಧ ''ಗೋ ಬ್ಯಾಕ್'' ಘೋಷಣೆಗಳನ್ನು ಕೂಗಿದರು.
ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು ಹಾಗೂ ಲಾಠಿ ಪ್ರಹಾರ ನಡೆಸಿದರು. ಆದರೆ, ಪ್ರತಿಭಟನಕಾರರು ಚದುರಲಿಲ್ಲ.
ಸೆಕ್ರೇಟರಿಯೇಟ್ನ ಮುಖ್ಯ ದ್ವಾರದ ಎದುರು ಅಳವಡಿಸಲಾಗದ್ದ ಬ್ಯಾರಿಕೇಡ್ ಗಳನ್ನು ಹಲವು ಮಹಿಳಾ ಪ್ರತಿಭಟನಕಾರರು ಏರಿದರು.