ಕೋಲ್ಕತ್ತ: ಕಳೆದ 9-10 ತಿಂಗಳಿಂದ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಪೂರ್ಣಾವಧಿ ಕುಲಪತಿಗಳನ್ನು ನೇಮಿಸದೇ ರಾಜ್ಯಪಾಲ ಸಿ.ವಿ ಆನಂದ ಬೋಸ್ ಅವರು ಬಿಕ್ಕಟ್ಟನ್ನು ಸೃಷ್ಟಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಶಿಕ್ಷಣ ಸಚಿವ ಬೃತ್ಯ ಬಸು ಆರೋಪಿಸಿದ್ದಾರೆ. 'ಸ್ವಾತಂತ್ರ್ಯ ಬಳಿಕ ದೇಶ ಇಂತಹ ಪರಿಸ್ಥಿತಿಯನ್ನು ಎದುರಿಸಿಲ್ಲ.
ಬ್ರಿಟೀಷ್ ಆಡಳಿತದಲ್ಲಿ ಭಾರತದಲ್ಲಿದ್ದ ಗವರ್ನರ್ ಜನರಲ್‌ಗಳಂತೆ ಈಗಿನ ರಾಜ್ಯಪಾಲರು ಸರ್ಕಾರವನ್ನು ನಿರ್ಲಕ್ಷ್ಯ ಮಾಡಿ, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಪರ್ಯಾಯ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯಪಾಲರು ಅವರ ಇಚ್ಛೆಯಂತೆ ಹಂಗಾಮಿ ಕುಲಪತಿಗಳನ್ನು ನೇಮಿಸಿದ್ದರು. ಅವರ ಅವಧಿ ಪೂರ್ಣಗೊಂಡಿದ್ದರೂ ಅವರನ್ನು ಬದಲಾಯಿಸಿಲ್ಲ' ಎಂದರು.
'ವಿಶ್ವವಿದ್ಯಾಲಯಗಳಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವು ಇತ್ತೀಚೆಗೆ ಹಂಗಾಮಿ ಕುಲಪತಿಗಳ ಪಟ್ಟಿಯನ್ನು ನೀಡಿದ್ದೇವೆ. ಈ ಬಗ್ಗೆ ಅವರು ಯಾವುದೇ ಕ್ರಮ ವಹಿಸಿಲ್ಲ ಎಂದರು. ಬಸು ಅವರ ಆರೋಪಗಳಿಗೆ ರಾಜಭವನವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.