ಮಂಗಳೂರು: ವಿದೇಶಿ ಅಡಿಕೆ ಆಮದನ್ನು ನಿಷೇಧಿಸಬೇಕು, ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಇಲ್ಲಿ ಪ್ರತಿಭಟನೆ ನಡೆಯಿತು.
ಬಿ.ಸಿ. ರೋಡ್‌ನಿಂದ ಮೂರು ಟ್ರ್ಯಾಕ್ಟರ್ ಹಾಗೂ ಕಾರಿನಲ್ಲಿ ಜಾಥಾ ಮೂಲಕ ಮಂಗಳೂರಿನ ಮಿನಿ ವಿಧಾನಸೌಧದ ವರೆಗೆ ಬಂದ ರೈತರು, ಅಲ್ಲಿ ಸಭೆ ನಡೆಸಿದರು.
ಒಕ್ಕೂಟದ ಪ್ರಮುಖರಾದ ನಾಗರತ್ನಮ್ಮ ಮಾತನಾಡಿ, 'ಬೇರೆ ಬೇರೆ ಜಿಲ್ಲೆಗಳ ರೈತರು ವಿಭಿನ್ನ ಸಮಸ್ಯೆ ಅನುಭವಿಸುತ್ತಿದ್ದಾರೆ. ಅರಸೀಕೆರೆ, ತಿಪಟೂರು ಭಾಗದಲ್ಲಿ ಕೊಬ್ಬರಿಗೆ ದರ ಇಲ್ಲ. ವರ್ಷದಲ್ಲಿ ಎರಡು ತಿಂಗಳು ಮಾತ್ರ ಸರ್ಕಾರ ಮಾರಾಟಕ್ಕೆ ಅವಕಾಶ ನೀಡುತ್ತದೆ. ಸರ್ಕಾರ ರೈತರನ್ನು ಜೀತದಾಳುಗಳಂತೆ ನೋಡುತ್ತಿದೆ. ಸ್ವಾಮಿನಾಥನ್ ವರದಿ ಪ್ರಕಾರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು' ಎಂದರು.
ಪ್ರತಿಭಟನೆ ಸಂಯೋಜಕ ಸನ್ನಿ ಡಿಸೋಜ ಮಾತನಾಡಿ, ರೈತರು ಬೆಳೆಯುವ ಈರುಳ್ಳಿ ರಫ್ತು ನಿಷೇಧಿಸಿರುವ ಕೇಂದ್ರ ಸರ್ಕಾರವು, ಬಂಡವಾಳಶಾಹಿಗಳ ಸಿಮೆಂಟ್, ಕಾರು, ಸ್ಟೀಲ್ ನಿಷೇಧಿಸುತ್ತದೆಯೇ? ರಫ್ತಿಗೆ ಅವಕಾಶ ಇದ್ದರೆ ರೈತರು ಒಂದಿಷ್ಟು ಆದಾಯ ಪಡೆಯಲು ಸಾಧ್ಯವಿತ್ತು. ಈರುಳ್ಳಿ ರಫ್ತು ನಿಷೇಧಿಸಿದಂತೆ, ಅಡಿಕೆ ಆಮದನ್ನು ಸರ್ಕಾರ ನಿಷೇಧಿಸಲಿ ಎಂದು ಸವಾಲು ಹಾಕಿದರು.
ಭಾರತ್ ಬ್ರ್ಯಾಂಡ್ ಹೆಸರಿನಲ್ಲಿ ಒಂದು ಕೆ.ಜಿ. ಅಕ್ಕಿಗೆ ₹29 ದರ ನೀಡುವ ಕೇಂದ್ರ ಸರ್ಕಾರ ₹200ಕ್ಕೆ ಸಿಮೆಂಟ್ ಒದಗಿಸಲಿ, ₹10 ಲಕ್ಷದ ಕಾರನ್ನು ₹5 ಲಕ್ಷಕ್ಕೆ ಭಾರತ್ ಹೆಸರಿನಲ್ಲಿ ನೀಡಲಿ. ಸರ್ಕಾರದ ನೀತಿಗಳಿಂದಾಗಿ ಸ್ವಾಭಿಮಾನಿ ರೈತರು ಸಾಲಗಾರರಾಗಿದ್ದಾರೆ. ಬಂಡವಾಳಶಾಹಿಗಳು ಹೋರಾಟ ನಡೆಸದಿದ್ದರೂ ₹14 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಸರ್ಕಾರ, ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಸ್ಥಳೀಯ ಗುಣಮಟ್ಟದ ಅಡಿಕೆ ಜೊತೆ ವಿದೇಶಿ ಕಳಪೆ ಅಡಿಕೆ ಮಿಶ್ರಣವಾಗಿ ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಸ್ಥಳೀಯ ಅಡಿಕೆಗೆ ಬೆಲೆ ಸಿಗುತ್ತಿಲ್ಲ. ವಿದೇಶಿ ಅಡಿಕೆ ಗುಣಮಟ್ಟದ ಬಗ್ಗೆ ವೈಜ್ಞಾನಿಕ ಪರೀಕ್ಷೆ ನಡೆಯಬೇಕು ಎಂದು ಒತ್ತಾಯಿಸಿದರು.
ಉಪವಿಭಾಗಾಧಿಕಾರಿ ಹರ್ಷವರ್ಧನ್ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಯನ್ನು ಕಳುಹಿಸಲಾಗುವುದು ಎಂದರು.
ಡಿವೈಎಫ್‌ಐ ರಾಜ್ಯ ಘಟಕದ ಉಪಾಧ್ಯಕ್ಷ ಮುನೀರ್ ಕಾಟಿಪಳ್ಳ, ರೈತ ಮುಖಂಡರಾದ ರೂಪೇಶ್ ರೈ, ಯಾದವ ಶೆಟ್ಟಿ, ರಾಬರ್ಟ್, ಗಿರೀಶ್ ಕೊಟ್ಟಾರಿ, ವಿನೋದ್ ಭಟ್, ಸುರೇಶ್, ಯತೀಂದ್ರ ಶೆಟ್ಟಿ, ದೀಕ್ಷಿತ್ ಕೋಟ್ಯಾನ್, ಬಾಲಕೃಷ್ಣ ಶೆಟ್ಟಿ, ಬಿ.ಎಂ.ಭಟ್, ಕೃಷ್ಣಪ್ಪ ಸಾಲ್ಯಾನ್, ಆಲ್ವಿನ್ ಮಿನೇಜಸ್ ಮೊದಲಾದವರು ಇದ್ದರು.