ಬದಿಯಡ್ಕ: ಕಾನತ್ತಿಲ ಶ್ರೀ ಧೂಮಾವತೀ ದೈವಸ್ಥಾನ ನವೀಕರಣ ಪ್ರತಿಷ್ಠಾ ಮಹೋತ್ಸವವು ಗುರುವಾರ ಜರಗಿತು. ಬ್ರಹ್ಮಶ್ರೀ ವೇದಮೂರ್ತಿ ಕಿಳಿಂಗಾರು ಶಿವರಾಮ ಭಟ್ ಪೆರಡಾಲ ಇವರ ಆಚಾರ್ಯತ್ವದಲ್ಲಿ 11.46ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಪ್ರತಿಷ್ಠಾ ಕಾರ್ಯ, ಕಲಶಾಭಿಷೇಕ ಜರಗಿತು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಬುಧವಾರ ಸಂಜೆ ಪುಣ್ಯಾಹವಾಚನ, ದೇವತಾ ಪ್ರಾರ್ಥನೆ, ಆಚಾರ್ಯ ಋತ್ವಿಗರಣ, ರಾಕ್ಷೋಘ್ನ ಹವನ, ವಾಸ್ತುಹವನ, ವಾಸ್ತುಬಲಿ, ವಾಸ್ತು ಪುಣ್ಯಾಹ ಜರಗಿತು. ಗುರುವಾರ ಬೆಳಗ್ಗೆ ಮಹಾಗಣಪತಿ ಹವನ, ಕಲಶಪೂಜೆ, ಪ್ರಾಸಾದ ಪ್ರತಿಷ್ಠೆ, ಮುಹೂರ್ತ ದಾನ, ಶ್ರೀ ಧೂಮಾವತಿ ದೈವದ ದಾರು ಪ್ರತಿಷ್ಠೆ, ಕಲಶಾಭಿಷೇಕ, ದೈವಗಳ ತಂಬಿಲ, ನಿತ್ಯನೈಮಿತ್ತಿಕಾದಿಗಳ ನಿರ್ಣಯ, ಮಂತ್ರಾಕ್ಷತೆ, ಪ್ರಸಾದ ವಿತರಣೆ ಜರಗಿತು. ಪ್ರಸಾದ ಭೋಜನದ ನಂತರ ನುರಿತ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಜರಗಿತು. ರಾತ್ರಿ ಶ್ರೀ ದುರ್ಗಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ತೊಡಂಗಲು, ಅನ್ನಸಂತರ್ಪಣೆ ಜರಗಿತು. ಶುಕ್ರವಾರ ಬೆಳಗ್ಗೆ ಶ್ರೀಧೂಮಾವತೀ ದೈವದ ನೃತ್ಯ, ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಿತು.