HEALTH TIPS

ಪಟ್ಟಭದ್ರರಿಂದ ನ್ಯಾಯಾಂಗಕ್ಕೆ ಅಗೌರವ ತರುವ ಯತ್ನ: ವಕೀಲರಿಂದ ಸಿಜೆಐಗೆ ಪತ್ರ

                ವದೆಹಲಿ: ನ್ಯಾಯಾಂಗದ ಮೇಲೆ ಒತ್ತಡ ತರಲು ಮತ್ತು ನ್ಯಾಯಾಲಯಗಳ ಮೇಲಿನ ಗೌರವಕ್ಕೆ ಕುತ್ತು ತರಲು 'ಪಟ್ಟಭದ್ರ ಹಿತಾಸಕ್ತಿಗಳ ಗುಂಪೊಂದು' ಯತ್ನಿಸುತ್ತಿದೆ ಎಂದು ಆರೋಪಿಸಿ 600ಕ್ಕೂ ಹೆಚ್ಚು ಮಂದಿ ವಕೀಲರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.      ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ.

              ಹಿರಿಯ ವಕೀಲ ಹರೀಶ್ ಸಾಳ್ವೆ, ವಕೀಲರ ಪರಿಷತ್ತಿನ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ಹಿರಿಯ ವಕೀಲ ಉದಯ ಹೊಳ್ಳ ಸೇರಿದಂತೆ ಹಲವರು ಇದಕ್ಕೆ ಸಹಿ ಮಾಡಿದ್ದಾರೆ. ರಾಜಕಾರಣಿಗಳಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಈ ರೀತಿ ಮಾಡಲು ಯತ್ನಿಸಲಾಗುತ್ತಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

               'ಈ ತಂತ್ರವು ನಮ್ಮ ನ್ಯಾಯಾಲಯಗಳಿಗೆ ಹಾಗೂ ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದೆ' ಎಂದು ಮಾರ್ಚ್‌ 26ರಂದು ಬರೆದಿರುವ ಪತ್ರದಲ್ಲಿ ಹೇಳಲಾಗಿದೆ. 'ಈಗಿನ ಕಷ್ಟಕಾಲದಲ್ಲಿ' ಸಿಜೆಐ ಚಂದ್ರಚೂಡ್ ಅವರ ನಾಯಕತ್ವವು ಬಹಳ ಮಹತ್ವದ್ದು; ಇದು ಘನತೆಯಿಂದ ಮೌನವಾಗಿರಬೇಕಾದ ಹೊತ್ತಲ್ಲ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

             ವಕೀಲರ ವರ್ಗವೊಂದು ಹಗಲು ಹೊತ್ತಿನಲ್ಲಿ ರಾಜಕಾರಣಿಗಳನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಿರುತ್ತದೆ, ರಾತ್ರಿ ಹೊತ್ತಿನಲ್ಲಿ ಮಾಧ್ಯಮಗಳ ಮೂಲಕ ನ್ಯಾಯಮೂರ್ತಿಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ವಕೀಲರ ಯಾವ ವರ್ಗವು ಹೀಗೆ ಮಾಡುತ್ತಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿಲ್ಲ.

            ಹಿಂದೆಲ್ಲ ಬಹಳ ಚೆನ್ನಾಗಿತ್ತು, ನ್ಯಾಯಾಲಯಗಳ ಪಾಲಿನ ಸುವರ್ಣಯುಗವೊಂದು ಇತ್ತು ಎನ್ನುವ ಈ ಗುಂಪು, ಈಗ ಕೋರ್ಟ್‌ಗಳಲ್ಲಿ ನಡೆಯುತ್ತಿರುವುದು ಹಿಂದಿನಂತೆ ಇಲ್ಲ ಎಂಬ ಸುಳ್ಳು ಸಂಕಥನವೊಂದನ್ನು ಸೃಷ್ಟಿಸುತ್ತಿದೆ ಎಂದು ಪತ್ರವು ಹೇಳಿದೆ. ಈ ಗುಂಪಿನ ಹೇಳಿಕೆಗಳು ರಾಜಕೀಯ ಲಾಭಕ್ಕಾಗಿ ನ್ಯಾಯಾಲಯಗಳ ಮೇಲೆ ಪ್ರಭಾವ ಬೀರುವ ಹಾಗೂ ಅವುಗಳಿಗೆ ಮುಜುಗರ ಉಂಟುಮಾಡುವ ಗುರಿ ಹೊಂದಿವೆ ಎಂದು ಕೂಡ ಪತ್ರದಲ್ಲಿ ಹೇಳಲಾಗಿದೆ.

           ಆದೀಶ್ ಅಗರ್ವಾಲ್, ಚೇತನ್ ಮಿತ್ತಲ್, ಪಿಂಕಿ ಆನಂದ್, ಹಿತೇಶ್ ಜೈನ್, ಉಜ್ವಲಾ ಪವಾರ್ ಮತ್ತು ಸ್ವರುಪಮಾ ಚತುರ್ವೇದಿ ಅವರು ಈ ಪತ್ರಕ್ಕೆ ಸಹಿ ಮಾಡಿರುವ ಕೆಲವು ಪ್ರಮುಖರು. ಈ ಪತ್ರದಲ್ಲಿ ಯಾವುದೇ ನಿರ್ದಿಷ್ಟ ಪ್ರಕರಣವನ್ನು ಉಲ್ಲೇಖಿಸಿಲ್ಲ. ವಿರೋಧ ಪಕ್ಷಗಳ ಪ್ರಮುಖರು ಆರೋಪಿಗಳಾಗಿರುವ ಹಲವು ಪ್ರಕರಣಗಳು ಕೋರ್ಟ್‌ಗಳಲ್ಲಿ ವಿಚಾರಣೆಯ ಹಂತದಲ್ಲಿ ಇರುವ ಸಂದರ್ಭದಲ್ಲಿ ಈ ಪತ್ರ ಬರೆಯಲಾಗಿದೆ.

             'ಪಟ್ಟಭದ್ರ ಹಿತಾಸಕ್ತಿಗಳ ಗುಂಪೊಂದು ಹುರುಳಿಲ್ಲದ ತರ್ಕ ಹಾಗೂ ಹಳಸಿಹೋಗಿರುವ ರಾಜಕೀಯ ಕಾರ್ಯಸೂಚಿಯನ್ನು ಆಧಾರವಾಗಿ ಇರಿಸಿಕೊಂಡು ನ್ಯಾಯಾಂಗದ ಮೇಲೆ ಒತ್ತಡ ತರಲು, ನ್ಯಾಯಾಂಗದ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಹಾಗೂ ನಮ್ಮ ನ್ಯಾಯಾಲಯಗಳಿಗೆ ಕೆಟ್ಟ ಹೆಸರು ತರಲು ನಡೆಸಿರುವ ಯತ್ನದ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿ ನಾವು ಈ ಪತ್ರವನ್ನು ಬರೆಯುತ್ತಿದ್ದೇವೆ' ಎಂದು ಪತ್ರದಲ್ಲಿ ಹೇಳಲಾಗಿದೆ.

            'ರಾಜಕೀಯ ‍ಪ್ರಕರಣಗಳಲ್ಲಿ, ಅದರಲ್ಲೂ ಮುಖ್ಯವಾಗಿ ರಾಜಕಾರಣಿಗಳು ಭ್ರಷ್ಟಾಚಾರದ ಆರೋಪ ಹೊತ್ತಿರುವ ಪ್ರಕರಣಗಳಲ್ಲಿ, ಒತ್ತಡ ತರುವ ಇವರ ತಂತ್ರಗಾರಿಕೆಯು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂತಹ ತಂತ್ರಗಾರಿಕೆಯು ನಮ್ಮ ನ್ಯಾಯಾಲಯಗಳಿಗೆ ಧಕ್ಕೆ ಉಂಟುಮಾಡುತ್ತಿದೆ ಹಾಗೂ ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಗೆ ಅಪಾಯ ಸೃಷ್ಟಿಸುತ್ತಿದೆ' ಎಂದು ವಿವರಿಸಿದ್ದಾರೆ.

'ನಮ್ಮ ನ್ಯಾಯಾಲಯಗಳನ್ನು ಕಾನೂನಿನ ಅನ್ವಯ ಆಡಳಿತವೇ ನಡೆಯುತ್ತಿಲ್ಲದ ದೇಶಗಳಿಗೆ ಹೋಲಿಸುವ ಮಟ್ಟಕ್ಕೆ ಇವರು ಇಳಿದಿದ್ದಾರೆ, ನಮ್ಮ ನ್ಯಾಯಾಂಗದ ಸಂಸ್ಥೆಗಳು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ನಡೆದುಕೊಳ್ಳುತ್ತಿವೆ ಎಂದು ಆರೋಪಿಸುತ್ತಿದ್ದಾರೆ. ಇವು ಟೀಕೆಗಳಷ್ಟೇ ಅಲ್ಲ. ಸಾರ್ವಜನಿಕರು ದೇಶದ ನ್ಯಾಯಾಂಗದ ಮೇಲೆ ಇರಿಸಿರುವ ವಿಶ್ವಾಸವನ್ನು ಹಾಳುವ ಮಾಡುವ ಉದ್ದೇಶದ ನೇರ ದಾಳಿಗಳು ಇವು' ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಇವರು 'ನಾವು ಹೇಳಿದ್ದೇ ಸತ್ಯ' ಎಂಬ ಧೊರಣೆಯನ್ನು ಬೆಳೆಸಿಕೊಂಡಿದ್ದಾರೆ. ತಮಗೆ ಸರಿಕಂಡ ತೀರ್ಪುಗಳನ್ನು ಹೊಗಳುತ್ತಾರೆ, ತಾವು ಒಪ್ಪದ ತೀರ್ಪುಗಳನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

            'ಕೆಲವರು ತಮಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಮೂರ್ತಿ ಯಾರಿರಬೇಕು ಎಂಬ ವಿಚಾರವಾಗಿ ಪ್ರಭಾವ ಬೀರುವ ಯತ್ನ ನಡೆಸಿದ್ದಾರೆ, ಆ ಪ್ರಕರಣದಲ್ಲಿ ನಿರ್ದಿಷ್ಟ ರೀತಿಯಲ್ಲಿ ಆದೇಶ ಪಡೆದುಕೊಳ್ಳಲು ನ್ಯಾಯಮೂರ್ತಿಗಳ ಮೇಲೆ ಒತ್ತಡ ತರಲು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳುಗಳನ್ನು ಹರಡುವ ಕೆಲಸ ಮಾಡುತ್ತಿದ್ದಾರೆ' ಎಂದು ಪತ್ರದಲ್ಲಿ ಹೇಳಲಾಗಿದೆ.

            ಸುಪ್ರೀಂ ಕೋರ್ಟ್‌ ಗಟ್ಟಿಯಾಗಿ ನಿಲ್ಲಬೇಕು, ಇಂತಹ ದಾಳಿಗಳಿಂದ ನ್ಯಾಯಾಲಯಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಪತ್ರ ಬರೆದಿರುವವರು ಕೋರಿದ್ದಾರೆ.

ಬೆದರಿಸುವುದು ಕಾಂಗ್ರೆಸ್ ಸಂಸ್ಕೃತಿ: ಮೋದಿ

              ನವದೆಹಲಿ: ಬೇರೊಬ್ಬರನ್ನು ಬೆದರಿಸುವ ಕೆಲಸ ಮಾಡುವುದು 'ಹಿಂದಿನಿಂದಲೂ ಬಂದಿರುವ ಕಾಂಗ್ರೆಸ್ ಸಂಸ್ಕೃತಿ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ. 600ಕ್ಕೂ ಹೆಚ್ಚು ವಕೀಲರು ಸಿಜೆಐ ಅವರನ್ನು ಉದ್ದೇಶಿಸಿ ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಮೋದಿ ಅವರು ಹೀಗೆ ಹೇಳಿದ್ದಾರೆ.

             ವಕೀಲರ ಪತ್ರವನ್ನು ಪ್ರಕಟಿಸಿರುವ 'ಎಕ್ಸ್‌' ಪೋಸ್ಟ್‌ ಒಂದನ್ನು ಟ್ಯಾಗ್ ಮಾಡಿ ಮೋದಿ ಅವರು ಹೀಗೆ ಹೇಳಿದ್ದಾರೆ. 'ಐದು ದಶಕಗಳ ಹಿಂದೆಯೇ ಕಾಂಗ್ರೆಸ್ಸಿನವರು ಸಹಮತದ ನ್ಯಾಯಾಂಗದ ಅಗತ್ಯ ಇದೆ ಎಂದು ಹೇಳಿದ್ದರು. ಅವರಿಗೆ ತಮ್ಮ ಸ್ವಾರ್ಥಕ್ಕೆ ಇತರರಿಂದ ಸಹಮತ ಬೇಕು. ಆದರೆ ರಾಷ್ಟ್ರದ ಹಿತಾಸಕ್ತಿಯ ವಿಚಾರವಾಗಿ ಅವರು ಯಾವುದೇ ಬದ್ಧತೆ ತೋರಲು ಹಿಂಜರಿಯುತ್ತಾರೆ' ಎಂದು ಮೋದಿ ಅವರು ಎಕ್ಸ್‌ ವೇದಿಕೆಯಲ್ಲಿ ಬರೆದಿದ್ದಾರೆ.

              '140 ಕೋಟಿ ಭಾರತೀಯರು ಅವರನ್ನು (ಕಾಂಗ್ರೆಸ್) ತಿರಸ್ಕರಿಸುತ್ತಿರುವುದರ ಹಿಂದೆ ಆಶ್ಚರ್ಯಕ್ಕೆ ಕಾರಣವಾಗುವ ಸಂಗತಿಗಳು ಯಾವುವೂ ಇಲ್ಲ' ಎಂದು ಕೂಡ ಅವರು ಬರೆದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries