ಕಾಸರಗೋಡು: ಸುಮಾರು 1800ವರ್ಷಗಳ ಇತಿಹಾಸ ಹೊಂದಿರುವ ಆರಿಕ್ಕಾಡಿ ಪಾರೆಸ್ಥಾನ ಶ್ರೀ ಭಗವತೀ ಆಲಿಚಾಮುಂಡಿ ಕ್ಷೇತ್ರದಲ್ಲಿನ ಆಚಾರ ವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಎರಡು ತರವಾಡಿನವರು ನಡೆದುಕೊಳ್ಳುತ್ತಿರುವುದಾಗಿ ಪಾರೆಸ್ಥಾನ ಶ್ರೀ ಭಗವತೀ ಆಲಿಚಾಮುಂಡಿ ಕ್ಷೇತ್ರ ಭಂಡಾರಸ್ಥಾನ ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ನಾಗೇಶ್ ಕಾರ್ಲೆ ಹಾಗೂ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ, ಬಂಬ್ರಾಣ ಯಜಮಾನ ಬಿ. ಮೋಹನದಾಸ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಲ್ಲಾ ಎಂಟು ತರವಾಡು ಮನೆಯವರು ಒಟ್ಟಾಗಿ ಸೇರಿಕೊಂಡು ಪ್ರತಿವರ್ಷ ಮಾ. 30ರಂದು ಭಂಡಾರ ಕ್ಷೇತ್ರದಿಂದ ಭಂಡಾರವನ್ನು ಶ್ರೀ ಭಗವತೀ ಆಲಿಚಾಮುಂಡಿ ಕ್ಷೇತ್ರಕ್ಕೆ ಕೊಂಡುಹೋಗಿ ಏ. 6ರ ವರೆಗೆ ಕಳಿಯಾಟ ಮಹೋತ್ಸವ ನಡೆಸಿ, ಭಂಡಾರ ವಾಪಾಸು ತರುವುದು ವಾಡಿಕೆ. 2023ರ ಮಾರ್ಚ್ ತಿಂಗಳ 26ರಂದು ದೇವಸ್ವಂ ಬೋರ್ಡ್ ಅಧಿಕಾರಿಗಳು ಶ್ರೀಭಂಡಾರದ ಮನೆಗೆ ಪತ್ರ ಬರೆದು, ಕ್ಷೇತ್ರಕ್ಕೆ ಅಗತ್ಯವಿರುವ ಭಂಡಾರವನ್ನು ಹೊಸತಾಗಿ ನಿರ್ಮಿಸಿರುವುದಾಗಿ ತಿಳಿಸಿದ್ದು, ಭಂಡಾರ ಕ್ಷೇತ್ರದಿಂದ ಭಂಡಾರ ಕೊಂಡೊಯ್ಯುವ ಸಂಪ್ರದಾಯವನ್ನು ಕೈಬಿಟ್ಟಿದ್ದಾರೆ. 1800ವರ್ಷಗಳಿಂದ ನಡೆದುಬರುತ್ತಿದ್ದ ಪಾರಂಪರಿಕ ವಿಧಿವಿಧಾನ ಕೈಬಿಟ್ಟು ಕಳಿಯಾಟ ನಡೆಸಲಾಗುತ್ತಿದೆ. ಕಳಿಯಾಟ ಅಂಗವಾಗಿ ಏ. 4ರಂದು ಗುರುವಿನ ಭೇಟಿಗಾಗಿ ಭಂಡಾರಕ್ಷೇತ್ರಕ್ಕೆ ಆಗಮಿಸುವ ಕಡೆಯಾನ್ ತಿರುಮಾಲ ಮತ್ತು ಬಬ್ಬರಿಯ ದೈವಗಳ ಭೇಟಿಯನ್ನೂ ಕೈಬಿಟ್ಟಿದ್ದಾರೆ. ಪರಂಪರಾಗತವಾಗಿ ನಡೆಯುವ ವಿಧಿವಿಧಾನ ಕೈಬಿಟ್ಟಿರುವುದರಿಂದ ಕ್ಷೆತ್ರಕ್ಕೆ ಸಂಬಂಧಿಸಿದ ಆರು ತರವಾಡು ಮನೆಯವರು ಕಳಿಯಾಟ ಮಹೋತ್ಸವದಲ್ಲಿ ಭಾಗವಹಿಸದೆ, ದೂರ ಉಳಿಯಬೇಕಾದ ಪರಿಸ್ಥಿತಿಯಿದೆ. ಈ ನಿಟ್ಟಿನಲ್ಲಿ ಭಂಡಾರಕ್ಷೇತ್ರದಲ್ಲಿ ಇರಿಸಲಾದ ಸ್ವರ್ಣಪ್ರಶ್ನೆ ಚಿಂತನೆ ಪ್ರಕಾರ ಕಳಿಯಾಟಮಹೋತ್ಸವದ ಭಾಗವಾಗಿ ಪೂರ್ವಿಕರು ಪೂಜಿಸಿಕೊಂಡು ಬಂದ ರೀತಿಯಲ್ಲಿ ದೈವ ಭಂಡಾರಗಳಿಗೆ ವಿಧಿವಿಧಾನ ನಡೆಸಲಾಗುತ್ತಿದೆ, ಜತೆಗೆ ಸ್ವರ್ಣಪ್ರಶ್ನೆ ಪ್ರಕಾರ ಭಂಡಾರ ಕ್ಷೇತ್ರ, ಗುರುಪೀಠ, ಭಂಡಾರ ಮನೆಯನ್ನು ನವೀಕರಿಸುವ ಕಾರ್ಯಕ್ಕೆ ಮುಂದಾಗಿದ್ದು, ಏ. 24ರಂದು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ರಾಮದಸ್ ಎ, ವಕೀಲೆ ಭಾಗ್ಯಶ್ರೀ ರೈ, ತರವಾಡು ಮನೆಯ ನಾರಾಯಣ ಕೆ, ಪಿ.ವಿ ಸುಕುಮಾರನ್ ಉಪಸ್ಥಿತರಿದ್ದರು.