ನವದೆಹಲಿ: ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕಾತಿ ಕುರಿತು ಮುಖ್ಯಮಂತ್ರಿಗಳು, ಹೈಕೋರ್ಟ್‌ಗಳ ಮುಖ್ಯನ್ಯಾಯಮೂರ್ತಿಗಳು ಹಾಗೂ ವಿರೋಧ ಪಕ್ಷಗಳ ನಾಯಕರು ನಡೆಸಬೇಕಾದ ಸಮಾಲೋಚನೆ ಪ್ರಕ್ರಿಯೆಗೆ ಸಂಬಂಧಿಸಿ ಮಾರ್ಗಸೂಚಿಗಳನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ನವದೆಹಲಿ: ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕಾತಿ ಕುರಿತು ಮುಖ್ಯಮಂತ್ರಿಗಳು, ಹೈಕೋರ್ಟ್‌ಗಳ ಮುಖ್ಯನ್ಯಾಯಮೂರ್ತಿಗಳು ಹಾಗೂ ವಿರೋಧ ಪಕ್ಷಗಳ ನಾಯಕರು ನಡೆಸಬೇಕಾದ ಸಮಾಲೋಚನೆ ಪ್ರಕ್ರಿಯೆಗೆ ಸಂಬಂಧಿಸಿ ಮಾರ್ಗಸೂಚಿಗಳನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ನಿವೃತ್ತ ನ್ಯಾಯಮೂರ್ತಿ ಸತ್ಯೇಂದ್ರಕುಮಾರ್ ಸಿಂಗ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಈ ನೇಮಕಾತಿ ವೇಳೆ ತಮ್ಮ ಜೊತೆ ಸಮಾಲೋಚನೆ ನಡೆಸಿಲ್ಲ ಎಂದು ದೂರಿ ಮಧ್ಯಪ್ರದೇಶ ವಿಧಾನಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ಉಮಂಗ್ ಸಿಂಘರ್ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
ಅಲ್ಲದೇ, ಅರ್ಜಿಗೆ ಸಂಬಂಧಿಸಿ ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಮೂವರು ಸದಸ್ಯರ ಪೀಠ ಅರ್ಜಿ ವಿಚಾರಣೆ ನಡೆಸಿದೆ.
'ಈ ವಿಷಯ ಇಡೀ ದೇಶದಾದ್ಯಂತ ಪರಿಣಾಮ ಬೀರುವಂಥದ್ದಾಗಿದೆ. ಹೀಗಾಗಿ, ಲೋಕಾಯುಕ್ತರ ನೇಮಕ ಸಂದರ್ಭದಲ್ಲಿ ಅನುಸರಿಬೇಕಾದ ಪ್ರಕ್ರಿಯೆ ಕುರಿತು ನಿರ್ಧರಿಸುವುದು ಅಗತ್ಯ' ಎಂದು ಪೀಠ ಹೇಳಿದೆ.
'ವಿಪಕ್ಷ ನಾಯಕ, ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದ ಸಮಿತಿಯ ಸದಸ್ಯ. ಲೋಕಾಯುಕ್ತ ಹುದ್ದೆಗೆ ಅಂತಿಮಗೊಳಿಸುವ ಹೆಸರುಗಳ ಕುರಿತು ಚರ್ಚೆ ನಡೆಸುವುದಕ್ಕೆ ವಿರೋಧ ಪಕ್ಷದ ನಾಯಕನಿಗೆ ಅವಕಾಶ ನೀಡಲೇಬೇಕು' ಎಂದು ಪೀಠ ಹೇಳಿದೆ.
'ಲೋಕಾಯುಕ್ತ ಹುದ್ದೆಗೆ ನೇಮಕಕ್ಕೆ ಅಂತಿಮಗೊಳಿಸಿದ ಅಭ್ಯರ್ಥಿ ಕುರಿತು ಘೋಷಣೆ ಮಾಡುವ ಮುನ್ನಾದಿನ ವಿಪಕ್ಷ ನಾಯಕನಿಗೆ ಮಾಹಿತಿ ನೀಡಿ, ಒಪ್ಪಿಗೆ ಪಡೆಯುವುದನ್ನು ಒಪ್ಪಲಾಗದು. ಇದಕ್ಕಾಗಿ ಕೆಲ ಮಾರ್ಗಸೂಚಿಗಳನ್ನು ರಚಿಸುವುದು ಅಗತ್ಯ. ಇಲ್ಲದೇ ಹೋದಲ್ಲಿ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕನ ಉಪಸ್ಥಿತಿಗೆ ಅರ್ಥವೇ ಇರುವುದಿಲ್ಲ' ಎಂದೂ ಪೀಠ ಹೇಳಿದೆ.
ಅರ್ಜಿದಾರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಹಾಜರಿದ್ದರು. ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.