ಮಾಸ್ಕೊ: ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮತ್ತೆ ಗೆಲುವಿನ ನಗೆ ಬೀರಿದ್ದಾರೆ. ಅವರು ಐದನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಈ ಬಾರಿ ಅವರು ಗೆಲ್ಲುವ ವಿಚಾರದಲ್ಲಿ ಅನುಮಾನಗಳೇ ಇರಲಿಲ್ಲ.
ವಿರೋಧಿಗಳ ದನಿಯನ್ನು ಹತ್ತಿಕ್ಕಿ, ಚುನಾವಣೆಯಲ್ಲಿ ಸಾಂಕೇತಿಕ ವಿರೋಧವನ್ನು ಮಾತ್ರ ಎದುರಿಸಿದ್ದ ಪುಟಿನ್ ಅವರು ಪುನರಾಯ್ಕೆ ಆಗುವುದು ಖಚಿತವಾಗಿತ್ತು.
'ನಮ್ಮೆ ಮುಂದೆ ಹಲವು ಕೆಲಸಗಳು ಇವೆ. ಆದರೆ ಎಲ್ಲರಿಗೂ ನಾನು ಇದನ್ನು ಸ್ಪಷ್ಟಪಡಿಸಲು ಬಯಸುವೆ: ನಾವು ಒಗ್ಗಟ್ಟಾಗಿದ್ದಾಗ ಯಾರಿಗೂ ನಮ್ಮನ್ನು ಬೆದರಿಸಲು, ನಮ್ಮ ಇಚ್ಛೆಯನ್ನು ಮತ್ತು ಆತ್ಮಸಾಕ್ಷಿಯನ್ನು ಹತ್ತಿಕ್ಕಲು ಆಗಿಲ್ಲ. ಅವರು ಹಿಂದೆಯೂ ವಿಫಲರಾಗಿದ್ದಾರೆ ಮುಂದೆಯೂ ವಿಫಲರಾಗುತ್ತಾರೆ' ಎಂದು ಪುಟಿನ್ ಅವರು ಮತದಾನ ಪೂರ್ಣಗೊಂಡ ನಂತರದಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಹೇಳಿದ್ದರು.
ರಷ್ಯಾದಲ್ಲಿ ಪುಟಿನ್ ಅವರನ್ನು ಬಹಿರಂಗವಾಗಿ ಟೀಕಿಸುವುದು, ಉಕ್ರೇನ್ ವಿರುದ್ಧದ ಸಮರವನ್ನು ಸಾರ್ವಜನಿಕವಾಗಿ ಟೀಕಿಸುವುದನ್ನು ಹತ್ತಿಕ್ಕಲಾಗಿದೆ. ಅಲ್ಲಿ ಸ್ವತಂತ್ರ ಮಾಧ್ಯಮಗಳ ದನಿ ಅಡಗಿಸಲಾಗಿದೆ. ರಾಜಕೀಯದಲ್ಲಿ ಪುಟಿನ್ ಅವರ ಕಡುವಿರೋಧಿ ಆಗಿದ್ದ ಅಲೆಕ್ಸಿ ನವಾಲ್ನಿ ಅವರು ಕಳೆದ ತಿಂಗಳು ಜೈಲಿನಲ್ಲಿ ಇದ್ದಾಗಲೇ ಮೃತಪಟ್ಟಿದ್ದಾರೆ. ಪುಟಿನ್ ಅವರ ಇತರ ಹಲವು ಟೀಕಾಕಾರರು ಒಂದೋ ಜೈಲಿನಲ್ಲಿದ್ದಾರೆ ಅಥವಾ ದೇಶದಿಂದ ಹೊರನಡೆದಿದ್ದಾರೆ.
ದೇಶದ ಎಲ್ಲ ಪ್ರದೇಶಗಳ ಮತ ಎಣಿಕೆಯು ಬಹುತೇಕ ಪೂರ್ಣಗೊಂಡಿದೆ, ಪುಟಿನ್ ಅವರು ಶೇಕಡ 87.29ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ರಷ್ಯಾದ ಕೇಂದ್ರ ಚುನಾವಣಾ ಆಯೋಗ ಸೋಮವಾರ ಹೇಳಿದೆ. ಸರಿಸುಮಾರು 7.6 ಕೋಟಿ ಮತದಾರರು ಪುಟಿನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಆಯೋಗದ ಮುಖ್ಯಸ್ಥೆ ಎಲ್ಲಾ ಪಾಮ್‌ಫಿಲೊವಾ ಹೇಳಿದ್ದಾರೆ. ಇದು ಪುಟಿನ್ ಅವರು ಈವರೆಗೆ ಪಡೆದಿರುವ ಅತಿಹೆಚ್ಚಿನ ಮತಗಳು.
ಉತ್ತರ ಕೊರಿಯಾ, ಹೊಂಡುರಾಸ್, ನಿಕರಾಗುವಾ ಮತ್ತು ವೆನೆಜುವೆಲಾ ದೇಶಗಳು ಪುಟಿನ್ ಅವರಿಗೆ ಅಭಿನಂದನೆ ಸಲ್ಲಿಸಿವೆ. ಆದರೆ ಪಾಶ್ಚಿಮಾತ್ಯ ದೇಶಗಳು ರಷ್ಯಾದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು 'ಕಪಟ' ಎಂದು ಕರೆದಿವೆ.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳು ಈ ರೀತಿಯಲ್ಲಿ ನಡೆಯುವುದಿಲ್ಲ ಎಂದು ಬ್ರಿಟನ್ನಿನ ವಿದೇಶಾಂಗ ಸಚಿವ ಡೇವಿಡ್ ಕ್ಯಾಮರೂನ್ ಹೇಳಿದ್ದಾರೆ. 'ಪುಟಿನ್ ಅವರು ತಮ್ಮ ರಾಜಕೀಯ ವಿರೋಧಿಗಳನ್ನು ಇಲ್ಲವಾಗಿಸುತ್ತಾರೆ, ಮಾಧ್ಯಮಗಳನ್ನು ನಿಯಂತ್ರಿಸುತ್ತಾರೆ ಹಾಗೂ ನಂತರದಲ್ಲಿ ತಮ್ಮನ್ನು ತಾವು ವಿಜಯಿ ಎಂದು ಘೋಷಿಸಿಕೊಳ್ಳುತ್ತಾರೆ. ಇದು ಪ್ರಜಾತಂತ್ರ ವ್ಯವಸ್ಥೆ ಅಲ್ಲ' ಎಂದು ಕ್ಯಾಮರೂನ್ ಟೀಕಿಸಿದ್ದಾರೆ.
ಪುಟಿನ್ ಅವರ ಬಗ್ಗೆ ಅಥವಾ ಉಕ್ರೇನ್ ವಿರುದ್ಧದ ಯುದ್ಧದ ಬಗ್ಗೆ ಅಸಮಾಧಾನ ಇರುವವರು ಭಾನುವಾರ ಮಧ್ಯಾಹ್ನದ ಹೊತ್ತಿಗೆ ಮತಗಟ್ಟೆಗಳ ಕಡೆ ಸಾಗಬೇಕು ಎಂದು ನವಾಲ್ನಿ ಅವರ ಜೊತೆಗಾರರು ಕರೆ ನೀಡಿದ್ದರು. ರಷ್ಯಾದಲ್ಲಿನ ಮತಗಟ್ಟೆಗಳಲ್ಲಿ ಹಾಗೂ ಬೇರೆ ದೇಶಗಳಲ್ಲಿ ಇರುವ ರಷ್ಯಾದ ರಾಯಭಾರ ಕಚೇರಿಗಳಲ್ಲಿ ಇರುವ ಮತಗಟ್ಟೆಗಳಲ್ಲಿ ಭಾನುವಾರ ಮಧ್ಯಾಹ್ನದ ಹೊತ್ತಿಗೆ ಜನರ ಸಂಖ್ಯೆಯು ಹೆಚ್ಚಾದಂತೆ ಕಂಡುಬಂತು. ಆದರೆ ಪ್ರತಿಭಟನೆ ಕರೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುಟಿನ್ ಅವರು, ತಾವು ಅದನ್ನು ಸ್ವಾಗತಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಪುಟಿನ್‌ಗೆ ಮೋದಿ ಅಭಿನಂದನೆ
ರಷ್ಯಾ ಅಧ್ಯಕ್ಷರಾಗಿ ಪುನರಾಯ್ಕೆಯಾದ ವ್ಲಾದಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ 'ಪ್ರೀತಿಯ ಅಭಿನಂದನೆ' ಸಲ್ಲಿಸಿದ್ದಾರೆ.
'ಭಾರತ ಮತ್ತು ರಷ್ಯಾ ನಡುವಿನ ವಿಶೇಷವಾದ ಹಾಗೂ ಸಮಗ್ರ ಪಾಲುದಾರಿಕೆಯ ಸಂಬಂಧವು ಕಾಲದ ಪರೀಕ್ಷೆಯನ್ನು ಗೆದ್ದುಬಂದಿದೆ. ಈ ಸಂಬಂಧವನ್ನು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಬಲಪಡಿಸಲು ನಾನು ಎದುರು ನೋಡುತ್ತಿದ್ದೇನೆ' ಎಂದು ಮೋದಿ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ಚೀನಾ ಅಭಿನಂದನೆ: ಪುಟಿನ್ ಪುನರಾಯ್ಕೆ ಆಗಿರುವುದಕ್ಕೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅಭಿನಂದನೆ ಸಲ್ಲಿಸಿದ್ದಾರೆ. 'ನಿಮ್ಮ ಪುನರಾಯ್ಕೆಯು ರಷ್ಯಾದ ಜನ ನಿಮಗೆ ನೀಡಿರುವ ಬೆಂಬಲವನ್ನು ತೋರಿಸುತ್ತಿದೆ. ಚೀನಾ-ರಷ್ಯಾ ಸಂಬಂಧ ಬಲಪಡಿಸುವುದಕ್ಕೆ ನಾವು ಆದ್ಯತೆ ನೀಡುತ್ತೇವೆ' ಎಂದು ಜಿನ್‌ಪಿಂಗ್ ಹೇಳಿದ್ದಾರೆ.