ಮುಂಬೈ: ನಾನು ಮಾತನಾಡಿದ್ದು ಯಾವುದೇ ಧಾರ್ಮಿಕ 'ಶಕ್ತಿ' ಬಗ್ಗೆ ಅಲ್ಲ. ಅಧರ್ಮ, ಭ್ರಷ್ಟಾಚಾರ ಮತ್ತು ಸುಳ್ಳಿನ ಶಕ್ತಿ ಬಗ್ಗೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ಶಕ್ತಿ ವಿರುದ್ಧ ಹೋರಾಟ' ಎಂಬ ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ನಾನು ಯಾವುದೇ ಧಾರ್ಮಿಕ ಶಕ್ತಿಯ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಅಧರ್ಮ, ಭ್ರಷ್ಟಾಚಾರ ಮತ್ತು ಸುಳ್ಳಿನ 'ಶಕ್ತಿ'ಯ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮಾತುಗಳನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಮೋದಿ ಮುಖವಾಡ ಧರಿಸಿರುವ ಶಕ್ತಿಯ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂದಿದ್ದಾರೆ.
“ಮೋದಿ ಜಿ ನನ್ನ ಮಾತುಗಳನ್ನು ಇಷ್ಟಪಡುವುದಿಲ್ಲ. ಅವರು ಯಾವಾಗಲೂ ಯಾವುದಾದರೂ ರೀತಿಯಲ್ಲಿ ತಿರುಚುವ ಮೂಲಕ ಅವುಗಳ ಅರ್ಥವನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ನಾನು ಗಂಭೀರವಾದ ಸತ್ಯವನ್ನು ಹೇಳುತ್ತೇನೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
"ನಾನು ಹೇಳಿದ 'ಶಕ್ತಿ' ಎಂದರೆ ಅಧಿಕಾರ. ಮೋದಿಜಿ ಆ ಶಕ್ತಿಯ ಮುಖವಾಡ ಮತ್ತು ನಾವು ಅದರ ವಿರುದ್ಧ ಹೋರಾಡುತ್ತಿದ್ದೇವೆ. ಅಂತಹ ಶಕ್ತಿಯೇ ಇಂದು ಭಾರತದ ಧ್ವನಿಯನ್ನು ಕಿತ್ತುಕೊಂಡಿದೆ. ಕೇಂದ್ರದ ತನಿಖಾ ಸಂಸ್ಥೆಗಳು, ಸಿಬಿಐ, ಐ-ಟಿ, ಇಡಿ, ಚುನಾವಣಾ ಆಯೋಗ, ಮಾಧ್ಯಮ, ಭಾರತೀಯ ಉದ್ಯಮ ಮತ್ತು ಭಾರತದ ಸಂಪೂರ್ಣ ಸಾಂವಿಧಾನಿಕ ರಚನೆಯು ಆ ಶಕ್ತಿ(ಅಧಿಕಾರ)ಯ ಹಿಡಿತದಲ್ಲಿದೆ” ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅದೇ 'ಶಕ್ತಿ'(ಅಧಿಕಾರ)ಯನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಬ್ಯಾಂಕ್‌ಗಳ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡುತ್ತಾರೆ. ಆದರೆ ಭಾರತೀಯ ರೈತ ಕೆಲವು ಸಾವಿರ ರೂಪಾಯಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಅದೇ ಶಕ್ತಿ'ಗೆ ಭಾರತದ ಬಂದರುಗಳು, ವಿಮಾನ ನಿಲ್ದಾಣಗಳನ್ನು ನೀಡಲಾಗುತ್ತದೆ. ಆದರೆ ಭಾರತದ ಯುವಕರಿಗೆ ಅವರ ಧೈರ್ಯವನ್ನು ಕುಗ್ಗಿಸುವ 'ಅಗ್ನಿವೀರ' ಉಡುಗೊರೆಯನ್ನು ನೀಡಲಾಗುತ್ತಿದೆ. ಅದೇ ಶಕ್ತಿಗೆ ಹಗಲು ರಾತ್ರಿ ಸೆಲ್ಯೂಟ್ ಮಾಡುವಾಗ, ದೇಶದ ಮಾಧ್ಯಮಗಳು ಸತ್ಯವನ್ನು ಮುಚ್ಚಿಡಿತ್ತಿವೆ.
''ಅದೇ ಅಧಿಕಾರದ ಗುಲಾಮರಾಗಿರುವ ನರೇಂದ್ರ ಮೋದಿ ಜಿ, ಹಣದುಬ್ಬರವನ್ನು ನಿಯಂತ್ರಿಸದೆ ದೇಶದ ಬಡವರ ಮೇಲೆ ಜಿಎಸ್‌ಟಿ ಹೇರಿ ಆ ಶಕ್ತಿಯ ಬಲವನ್ನು ಹೆಚ್ಚಿಸಲು ದೇಶದ ಸಂಪತ್ತನ್ನು ಹರಾಜು ಹಾಕುತ್ತಾರೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
"ನಾನು ಆ ಶಕ್ತಿ(ಅಧಿಕಾರ)ಯ ವಿರುದ್ಧ ಹೋರಾಡುತ್ತಿದ್ದೇನೆ ಮತ್ತು ಅದು ನರೇಂದ್ರ ಮೋದಿ ಕೂಡ. ಇದು ಯಾವುದೇ ರೀತಿಯ ಧಾರ್ಮಿಕ ಶಕ್ತಿಯಲ್ಲ. ಅದು ಅಧರ್ಮ, ಭ್ರಷ್ಟಾಚಾರ ಮತ್ತು ಸುಳ್ಳಿನ ಶಕ್ತಿ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.