ಮಂಜೇಶ್ವರ: ಮೀಯಪದವು ಮದಕ್ಕಳ ನಿವಾಸಿ ಮೊಯ್ದೀನ್ ಆರಿಫ್(22)ಕೊಲೆ ಪ್ರಕರಣದ ಇಬ್ಬರು ಆರೋಪಿಗಳು ವಿದೇಶಕ್ಕೆ ಪರಾರಿಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಇವರನ್ನು ಉರಿಗೆ ಕರೆತರುವ ಪ್ರಯತ್ನ ಮುಂದುವರಿಸಿದ್ದಾರೆ. ಉಳಿದ ಆರೋಪಿಗಳು ಬೆಂಗಳೂರು, ಗೋವಾದಲ್ಲಿ ತಲೆಮರೆಸಿಕೊಂಡಿದ್ದು, ಇವರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಅಬ್ದುಲ್ ರಶೀದ್, ಸೌಕತ್ತಲಿ, ಅಬೂಬಕ್ಕರ್ ಸಿದ್ದೀಕ್ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ. ಆರಿಫ್ ಸಾವಿಗೆ ಗಂಭೀರ ಹಲ್ಲೆ ಕಾರಣ ಎಂಬುದಾಗಿ ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿತ್ತು.
ಗಾಂಜಾ ಸೇವಿಸಿ ಗಲಭೆ ನಡೆಸಿದ ಹಿನ್ನೆಲೆಯಲ್ಲಿ ಮೊಯ್ದೀನ್ ಆರಿಫ್‍ನನ್ನು ಮಂಜೇಶ್ವರ ಠಾಣೆ ಪೊಲೀಸರು ಮಾ. 2ರಂದು ಬಂಧಿಸಿದ್ದರು. ನಂತರ ಅಬ್ದುಲ್ ರಶೀದ್ ಠಾಣೆಯಿಂದ ಮೊಯ್ದೀನ್ ಆರಿಫ್‍ನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿ, ಬೈಕಿನಲ್ಲಿ ಕರೆದೊಯ್ದಿದ್ದನು. ಸೋಮವಾರ ಮೊಯ್ದೀನ್ ಆರಿಫ್ ತನ್ನ ಮನೆಯಲ್ಲಿ ರಕ್ತವಾಂತಿ ನಡೆಸಿದ ಹಿನ್ನೆಲೆಯಲ್ಲಿ ಈತನನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.