ನವದೆಹಲಿ: ಮಿಲಿಟರಿ ತರಬೇತಿಯ ಸಂದರ್ಭದಲ್ಲಿ ಗಾಯಗೊಂಡ ಕಾರಣದಿಂದಾಗಿ ಮಿಲಿಟರಿ ಸೇವೆಗೆ ಸೇರಲು ಅನರ್ಹರಾಗುವವರಿಗೆ ಪುನರ್ವಸತಿ ಸೌಲಭ್ಯವನ್ನು ವಿಸ್ತರಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಒಪ್ಪಿಗೆ ನೀಡಿದ್ದಾರೆ.
ಗಾಯಗೊಂಡ ಪರಿಣಾಮವಾಗಿ ಸೇನೆಗೆ ಸೇರಲು ಆಗದವರಿಗೆ ಪುನರ್ವಸತಿ ಸೌಲಭ್ಯವನ್ನು ವಿಸ್ತರಿಸಬೇಕು ಎಂಬ ಬೇಡಿಕೆಯು ಸೇನೆಯ ಕಡೆಯಿಂದಲೂ ಇತ್ತು.
'ಸಶಸ್ತ್ರ ಪಡೆಗಳಿಗೆ ಅಧಿಕಾರಿಗಳಾಗಿ ಸೇರುವ ಉದ್ದೇಶದೊಂದಿಗೆ ಮಿಲಿಟರಿಗೆ ಅಕಾಡೆಮಿಗಳಿಗೆ ಕಿರಿಯ ವಯಸ್ಸಿನಲ್ಲಿ ಸೇರುವವರು ಸೇನಾ ಸಮವಸ್ತ್ರದಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ ಬದ್ಧತೆಯನ್ನು ತೋರಿರುತ್ತಾರೆ. ಆದರೆ ದುರದೃಷ್ಟವಶಾತ್ ಅನರ್ಹಗೊಳ್ಳುತ್ತಾರೆ. ಹೀಗಾಗಿ ಇವರಿಗೆ ಸೌಲಭ್ಯಗಳನ್ನು ವಿಸ್ತರಿಸುವ ತೀರ್ಮಾನ ಕೈಗೊಳ್ಳಲಾಗಿದೆ' ಎಂದು ರಕ್ಷಣಾ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪುನರ್ವಸತಿ ಅವಕಾಶವನ್ನು ಕಲ್ಪಿಸಬೇಕು ಎಂದು ತರಬೇತಿ ನಿರತರು ಹಾಗೂ ಅವರ ಪಾಲಕರು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರು ಎಂದು ಸಚಿವಾಲಯ ಹೇಳಿದೆ. ವೈದ್ಯಕೀಯ ಕಾರಣಗಳಿಂದಾಗಿ ಪ್ರತಿ ವರ್ಷ ಅಂದಾಜು 10ರಿಂದ 20 ಮಂದಿ ಅನರ್ಹಗೊಳ್ಳುತ್ತಾರೆ.
'ಪ್ರತಿ ವರ್ಷ ಯುವ ತರಬೇತಿನಿರತರು ಮಿಲಿಟರಿ ಅಕಾಡೆಮಿಗಳಲ್ಲಿ ಮಿಲಿಟರಿ ತರಬೇತಿ ಹಾಗೂ ಅಕಾಡೆಮಿಕ್ ತರಬೇತಿಯನ್ನು ಪಡೆಯುತ್ತಾರೆ. ಅವರ ಮುಖ್ಯ ಗುರಿ ಸಶಸ್ತ್ರ ಪಡೆಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುವುದಾಗಿರುತ್ತದೆ. ತರಬೇತಿನಿರತರು ಸೇನೆಗೆ ಸೇರಿದ ನಂತರವಷ್ಟೇ ಅವರನ್ನು ಅಧಿಕಾರಿಗಳನ್ನಾಗಿ ಪರಿಗಣಿಸಲಾಗುತ್ತದೆ' ಎಂದು ಸಚಿವಾಲಯ ವಿವರಿಸಿದೆ.
ಪುನರ್ವಸತಿ ಮಹಾನಿರ್ದೇಶನಾಲಯವು ಅರ್ಹರಿಗೆ ರೂಪಿಸುವ ಸ್ವ-ಉದ್ಯೋಗ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಇನ್ನು ಮುಂದೆ ಇವರಿಗೆ ಅವಕಾಶ ಸಿಗಲಿದೆ.
ಆದರೆ, ತಮ್ಮನ್ನು ಕೂಡ ನಿವೃತ್ತ ಯೋಧರನ್ನಾಗಿ ಪರಿಗಣಿಸಬೇಕು ಎಂದು ತರಬೇತಿ ಪಡೆದ ಹಾಗೂ ಗಾಯಗಳ ಕಾರಣದಿಂದಾಗಿ ಸೇನೆಗೆ ಸೇರಲಾಗದ ಇವರು ಇರಿಸಿದ್ದ ಬೇಡಿಕೆಯ ವಿಚಾರವಾಗಿ ಸಚಿವಾಲಯವು ಯಾವುದೇ ಪ್ರಕಟಣೆ ಹೊರಡಿಸಿಲ್ಲ. 'ನಿವೃತ್ತ ಯೋಧರು' ಎಂದು ಪರಿಗಣಿಸಿದರೆ ಇವರಿಗೆ ಅಂಗವೈಕಲ್ಯ ಪಿಂಚಣಿ ಪಡೆಯಲು ಅರ್ಹತೆ ಸಿಗುತ್ತದೆ.