ಕೊಲ್ಲಂ: ಸೋಮವಾರ ಬೆಳಿಗ್ಗೆ ಪ್ಯಾಟ್ನಿಬಿನ್ ಮ್ಯಾಕ್ಸ್ ವೆಲ್ ಕೊಲ್ಲಂನಲ್ಲಿರುವ ತಮ್ಮ ಕುಟುಂಬಕ್ಕೆ ಕರೆ ಮಾಡಿ ಮಾತನಾಡಿದಾಗ, ಎಂದಿನಂತೆ ಉತ್ಸಾಹದಿಂದ ಮಾತನಾಡಿದರು. ಆದರೆ ಅದರಲ್ಲಿ ಆಂತಕದ ಎಳೆಯನ್ನು ತಂದೆ ಗಮನಿಸಿದ್ದರು. ಉತ್ತರ ಇಸ್ರೇಲ್ ನ ಗಲಿಲೀ ನಗರದಿಂದ ಕರೆ ಮಾಡಿದ್ದ ಪ್ಯಾಟ್ನಿಬಿನ್ ತನ್ನ ಗರ್ಭಿಣಿ ಪತ್ನಿ ಸೆಯೋನಾ ಹಾಗೂ ಐದು ವರ್ಷದ ಪುತ್ರಿ ಅಮಿಯಾ ಜತೆ ಮಾತನಾಡಿದ ಬಳಿಕ ತಂದೆಯ ಜತೆ ಮಾತನಾಡಿ, ತಾನು ಕೆಲಸ ಮಾಡುವ ಮಾರ್ಗಲಿಯೋತ್ ಕೋಳಿ ಫಾರಂ ಇದೀಗ ಸುರಕ್ಷಿತವಾಗಿ ಉಳಿದಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದರು.
ಕೆಲಗಂಟೆಗಳಲ್ಲಿ ಪ್ಯಾಟ್ನಿಬಿನ್ ಅವರು ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟರು ಎಂದು ವರದಿಯಾಗಿದೆ.
ಲೆಬನಾನ್ ನ ಹಝ್ ಬುಲ್ಲಾ ಗಡಿಯಾಚೆಗಿನಿಂದ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಪ್ಯಾಟ್ನಿಬಿನ್ ಮೃತಪಟ್ಟರು. ಜೋಸೆಫ್ ಜಾರ್ಜ್ ಹಾಗೂ ಪಾಲ್ ಮೆಲ್ವಿನ್ ಎಂಬ ಕೇರಳ ಮೂಲದ ಇಬ್ಬರು ಸೇರಿದಂತೆ ಘಟನೆಯಲ್ಲಿ ಏಳು ಮಂದಿ ಇತರರು ಗಾಯಗೊಂಡಿದ್ದಾರೆ.
ಎರಡು ವಾರ ಹಿಂದೆ ಇಂಥದ್ದೇ ದಾಳಿ ನಡೆದಿತ್ತು. ಆದ್ದರಿಂದ ಸುರಕ್ಷಿತ ಜಾಗಕ್ಕೆ ತೆರಳುವಂತೆ ಮಗನಿಗೆ ಸೂಚಿಸಿದ್ದಾಗಿ ತಂದೆ ಪತ್ರೋಸ್ ಮ್ಯಾಕ್ಸ್ವೆಲ್ ಬಹಿರಂಗಪಡಿಸಿದ್ದಾರೆ. ಆದರೆ ಪ್ರಾಯೋಜಕರಿಂದ ಒಪ್ಪಿಗೆ ದೊರಕದ ಕಾರಣ ಸುರಕ್ಷಿತ ತಾಣಕ್ಕೆ ತೆರಳುವುದು ಸಾಧ್ಯವಾಗಿರಲಿಲ್ಲ ಎನ್ನುವುದು ಅವರ ಅಳಲು. "ನನ್ನ ಹಿರಿಯ ಮಗ ನಿವಿನ್ ಕೂಡಾ ಇಸ್ರೇಲ್ ನಲ್ಲಿದ್ದು, ಸೋಮವಾರ ಸಂಜೆ 4.30ಕ್ಕೆ ಕರೆ ಮಾಡಿ, ನಿಬಿನ್ ಗಾಯಗೊಂಡು ಆಸ್ಪತ್ರೆ ಸೇರಿರುವ ವಿಚಾರ ತಿಳಿಸಿದ. ಮಧ್ಯರಾತ್ರಿ ಬಳಿಕ 12.45ರ ವೇಳೆಗೆ ಕರೆ ಮಾಡಿ ನಿಬಿನ್ ಮೃತಪಟ್ಟಿದ್ದಾಗಿ ತಿಳಿಸಿದ" ಎಂದು ವಿವರಿಸಿದರು.
ಉತ್ತಮ ವೇತನ ಸಿಗುತ್ತದೆ ಎಂಬ ಕಾರಣಕ್ಕೆ ಪ್ಯಾಟ್ ನಿಬಿನ್ ಇತ್ತೀಚೆಗೆ ಗಲಿಲೀ ನಗರದ ಕೋಳಿ ಫಾರಂಗೆ ತೆರಳಿದ್ದರು. ಬಡಕುಟುಂಬದಲ್ಲಿ ಬೆಳೆದ ನಿಬಿನ್, ಭದ್ರ ಭವಿಷ್ಯದ ಮೇಲಿನ ನಂಬಿಕೆಯಿಂದ ಇಸ್ರೇಲ್ಗೆ ತೆರಳಿದ್ದರು. ಚಾವರ ಐಟಿಐನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದು ಮಸ್ಕತ್ ಗೆ ತೆರಳಿದ್ದರು. ಐಸ್ ಪ್ಲಾಂಟ್ ನಲ್ಲಿ ಅಲ್ಲಿ ಕಾರ್ಯನಿರ್ವಹಿಸಿದ ಬಳಿಕ ದುಬೈನ ಉದ್ಯೋಗಿಗಳ ಪೂರೈಕೆ ಕಂಪನಿ ಸೇರಿದ್ದರು. ಪತ್ನಿ ಸೆಯೋನಾ ನರ್ಸ್ ಆಗಿದ್ದು, ಪ್ರಸ್ತುತ ಉದ್ಯೋಗದಲ್ಲಿಲ್ಲ.