ಕಾಸರಗೋಡು: ಪೇರಡ್ಕ ಮಹಾತ್ಮಜಿ ಗ್ರಂಥಾಲಯ ಹಾಗೂ ಗ್ರಂಥಾಲಯ ವತಿಯಿಂದ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸಲಾಯಿತು. ಪೂಕೋಡ್ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳ ಕಿರುಕುಳದಿಂದ ಮೃತಪಟ್ಟ ವಿದ್ಯಾರ್ಥಿಯ ಸಾವು ಖಂಡಿಸಿ ವಿಶೇಷ ರೀತಿಯಲ್ಲಿ ಪ್ರತಿಭಟಿಸಲಾಯಿತು.
ಕಾಲೇಜು ಆವರಣದಲ್ಲಿ ನಡೆದ ಆಘಾತಕಾರಿ ಘಟನೆ ಮುಂದಕ್ಕೆ ಮರುಕಳಿಸದಂತೆ ಅಧಿಕಾರಿ ವರ್ಗ ಎಚ್ಚೆತ್ತುಕೊಳ್ಳಬೇಕು. ಯಾವುದೇ ವಿದ್ಯಾರ್ಥಿ ಸಂಘದಲ್ಲಿ ನಡೆಯುವ ಈ ರೀತಿಯ ದೌರ್ಜನ್ಯ ಖಂಡನೀಯವಾಗಿದೆ. ಅಪರಾಧದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿರುವವರನ್ನು ಕಾನೂನಿನ ಮುಂದೆ ತಂದು ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಂತಹ ಹಿಂಸಾಚಾರವನ್ನು ಎಲ್ಲ ಸಾಮಾಜಿಕ ಮತ್ತು ಸ್ವಯಂ ಸೇವಾ ಕಾರ್ಯಕರ್ತರು ಬಲವಾಗಿ ವಿರೋಧಿಸಬೇಕು ಎಂದು ಸಭೆ ತಿಳಿಸಿದೆ.
ಪ್ರತಿಭಟನೆಯ ಸಂಕೇತವಾಗಿ ಮೇಣದಬತ್ತಿಯನ್ನು ಬೆಳಗಿಸಲಾಯಿತು. ಗ್ರಂಥಾಲಯದ ಅಧ್ಯಕ್ಷ ಕೆ.ರಘು, ಕಾರ್ಯದರ್ಶಿ ಸತ್ಯನ್ ಕೆ, ಕಾರ್ಯಕಾರಿ ಸದಸ್ಯರಾದ ಪಿ ರಾಧಾಕೃಷ್ಣನ್, ರವಿ ಪಾಂಡಿ, ಸಾಜು ಟಿ, ವಿನೋದ್ ಕುಮಾರ್ ಟಿ.ವಿ, ಹನೀಫ ಕೆ.ಎಂ, ಬಾಲವೇದಿ ಕಾರ್ಯದರ್ಶಿ ಅಮೃತ, ಬಾಲವೇದಿ ಸದಸ್ಯರಾದ ಅಭಿನವ್, ಅಕ್ಷಿತ್, ಶಬರಿನಾಥ್, ಸೌಪರ್ಣಿಕಾ, ಅನ್ವಿತ್, ಅನಿರುದ್ಧ, ಆರಾಧ್ಯ, ಆದೀಶ್ ಉಪಸ್ಥಿತರಿದ್ದರು.