ಮುಂಬೈ: ನಕಲಿ ಪ್ರಮಾಣಪತ್ರದೊಂದಿಗೆ ನಕಲಿ ಕಲಾಕೃತಿಗಳನ್ನು ಮಾರಾಟ ಮಾಡುತ್ತಿದ್ದ ಅಕ್ರಮ ಜಾಲದ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಇಲ್ಲಿಯ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಮುಂಬೈ: ನಕಲಿ ಪ್ರಮಾಣಪತ್ರದೊಂದಿಗೆ ನಕಲಿ ಕಲಾಕೃತಿಗಳನ್ನು ಮಾರಾಟ ಮಾಡುತ್ತಿದ್ದ ಅಕ್ರಮ ಜಾಲದ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಇಲ್ಲಿಯ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್‌ಎ) ಅಡಿ ಮಾರ್ಚ್ 13ರಂದು ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಮಾರಾಟ ಮಾಡುವ ಕಲಾಕೃತಿಗಳಿಗೆ ನಕಲಿ ಪ್ರಮಾಣೀಕರಣ, ಅದರ 'ಮೂಲ' ಕುರಿತ ಪ್ರಮಾಣಪತ್ರವನ್ನು ಅವರೇ ಖುದ್ದು ತಯಾರಿಸುತ್ತಿದ್ದಾರೆ. ನಗದು ಮುಖಾಂತರ ವ್ಯವಹಾರ ಮಾಡುತ್ತಿದ್ದಾರೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಜೇಶ್ ರಾಜ್‌ಪಾಲ್ ಮತ್ತು ವಿಶ್ವಾಂಗ್ ದೇಸಾಯಿ ಎಂಬುವವರು ₹17.9 ಕೋಟಿ ಪಡೆದು ನಕಲಿ ಕಲಾಕೃತಿಗಳು ಮತ್ತು ಪ್ರಮಾಣಪತ್ರಗಳನ್ನು ನೀಡಿ ವಂಚನೆ ಎಸಗಿರುವ ಕುರಿತು ಪುನೀತ್ ಭಾಟಿಯಾ ಎಂಬುವವರು ಮುಂಬೈನ ತಾರ್‌ದೇವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಹಲವು ಸೆಕ್ಷನ್‌ಗಳ ಅಡಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಈ ಎಫ್‌ಐಆರ್ ಆಧರಿಸಿ ಇ.ಡಿ ತನಿಖೆ ನಡೆಸುತ್ತಿದೆ.
ದೇಶದ ಪ್ರಖ್ಯಾತ ಕಲಾವಿದರಾದ ಜಾಮಿನಿ ರಾಯ್, ಎಂ.ಎಫ್. ಹುಸೇನ್, ಎಫ್.ಎನ್. ಸೌಜಾ, ಜಹಾಂಗೀರ್ ಸಬಾವಾಲಾ, ಎಸ್.ಎಚ್. ರಾಜಾ, ಎನ್.ಎಸ್. ಬೇಂದ್ರೆ, ರಾಮ್‌ಕುಮಾರ್ ಮುಂತಾದವರ ಕಲಾಕೃತಿಗಳನ್ನೂ ಇವರು ನಕಲು ಮಾಡಿದ್ದಾರೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.