ಪಾಲಕ್ಕಾಡ್: ಚುನಾವಣೆ ಘೋಷಣೆಯಾದ ನಂತರ ಕೇರಳಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಮೊದಲ ರೋಡ್ ಶೋ ಪಾಲಕ್ಕಾಡ್‍ನಲ್ಲಿ ನಡೆಸಿದರು.
ಮರ್ಸಿ ಕಾಲೇಜು ಮೈದಾನದಲ್ಲಿರುವ ಹೆಲಿಪ್ಯಾಡ್‍ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಮಾರ್ಗವಾಗಿ ಕೊಟ್ಟಮೈದಾನ ತಲುಪಿದರು. ಕೊಟ್ಟಮೈದಾನದ ಅಂಚುವಿಳಕ್ ನಿಂದ ಪ್ರಧಾನ ಅಂಚೆ ಕಚೇರಿ ಆವರಣದವರೆಗೆ ರೋಡ್ ಶೋ ನಡೆಯಿತು.
ಪ್ರಧಾನಿ ಭೇಟಿಗೆ ಸಾವಿರಾರು ಜನರು ಆಗಮಿಸಿದ್ದರು. ಕೊಯಮತ್ತೂರಿನಿಂದ ಬೆಳಗ್ಗೆ 10.20ಕ್ಕೆ ಪಾಲಕ್ಕಾಡ್ ಮರ್ಸಿ ಕಾಲೇಜ್ ಮೈದಾನಕ್ಕೆ ಆಗಮಿಸಿದ ಮೋದಿ ಅಲ್ಲಿಂದ ರಸ್ತೆ ಮಾರ್ಗವಾಗಿ ಅಂಚುವಿಳಕ್ ತಲುಪಿ ರೋಡ್ ಶೋನಲ್ಲಿ ಭಾಗವಹಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರು ಪಾಲಕ್ಕಾಡ್, ಪೆÇನ್ನಾನಿ ಮತ್ತು ಮಲಪ್ಪುರಂ ಕ್ಷೇತ್ರಗಳ ಅಭ್ಯರ್ಥಿಗಳೊಂದಿಗೆ ಹೂವಿನಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ತೆರಳಿದರು. ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ಮೋದಿಯವರ ಮೊದಲ ರೋಡ್ ಶೋ ಪಾಲಕ್ಕಾಡ್ ಆಗಿತ್ತು.
ಅಂಚುವಿಳಕ್ ನಿಂದ ಪ್ರಧಾನ ಅಂಚೆ ಕಚೇರಿವರೆಗೆ ಒಂದು ಕಿಲೋಮೀಟರ್ ದೂರದಷ್ಟು ರೋಡ್ ಶೋ ನಡೆಯಿತು. ಎನ್ ಡಿಎ ಎದುರು ನೋಡುತ್ತಿರುವ ಪಾಲಕ್ಕಾಡ್ ಕ್ಷೇತ್ರದ ಅಭ್ಯರ್ಥಿ ಸಿ ಕೃಷ್ಣಕುಮಾರ್ ಪರ ಮತ ಯಾಚಿಸಲು ಮೋದಿ ಪಾಲಕ್ಕಾಡ್ ಗೆ ಬಂದಿದ್ದರು.
ಭೇಟಿಗೆ ಮುನ್ನ ಪಾಲಕ್ಕಾಡ್ ನಗರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ರೋಡ್ ಶೋ ಅಂತ್ಯಗೊಂಡ ಬಳಿಕ ಪ್ರಧಾನಿಯವರು ಮೋಯನ್ ಸ್ಕೂಲ್ ಜಂಕ್ಷನ್, ಟೌನ್ ರೈಲ್ವೇ ಮೇಲ್ಸೇತುವೆ, ಶಕುಂತಲಾ ಜಂಕ್ಷನ್, ಬಿಇಎಂ ಸ್ಕೂಲ್ ಜಂಕ್ಷನ್, ಕೆಎಸ್‍ಆರ್‍ಟಿಸಿ ಮೂಲಕ ಮರ್ಸಿ ಕಾಲೇಜು ಮೈದಾನ ತಲುಪಿ ಸೇಲಂಗೆ ತೆರಳಿದರು.
ಬಿಜೆಪಿ ಕೇರಳ ಪ್ರಭಾರಿ ಪ್ರಕಾಶ್ ಜಾವಡೇಕರ್, ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಮತ್ತು ಪಾಲಕ್ಕಾಡ್, ಪೆÇನ್ನಾನಿ ಮತ್ತು ಮಲಪ್ಪುರಂ ಕ್ಷೇತ್ರಗಳ ಅಭ್ಯರ್ಥಿಗಳು ಮೋದಿ ಅವರನ್ನು ಬರಮಾಡಿಕೊಂಡರು.