ಕಲ್ಕತ್ತಾ: ರಾಮಕೃಷ್ಣ ಮಿಷನ್‌ನ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಮಹಾರಾಜ್ ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ರಾಮಕೃಷ್ಣ ಮಿಷನ್, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಪೂಜ್ಯನೀಯ ಅಧ್ಯಕ್ಷರಾದ ಶ್ರೀ ಸ್ವಾಮಿ ಸ್ಮರಣಾನಂದ ಮಹಾರಾಜ್ ಅವರು ರಾತ್ರಿ 8.14ಕ್ಕೆ ನಿಧನರಾಗಿದ್ದಾರೆ.
ಸ್ಮರಣಾನಂದರನ್ನು ಮೂತ್ರನಾಳದ ಸೋಂಕಿನಿಂದಾಗಿ ಜನವರಿ 29 ರಂದು ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನಕ್ಕೆ ದಾಖಲಿಸಲಾಗಿತ್ತು. ನಂತರ ಅವರು ಉಸಿರಾಟದ ವೈಫಲ್ಯ ಅನುಭವಿಸಿದ್ದರು, ಇದಕ್ಕಾಗಿ ಅವರನ್ನು ಮಾರ್ಚ್ 03ರಿಂದ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ರಾಮಕೃಷ್ಣ ಮಿಷನ್‌ನ ಅಧ್ಯಕ್ಷರಾದ ಶ್ರೀ ಸ್ವಾಮಿ ಸ್ಮರಣಾನಂದ ಮಹಾರಾಜ್ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸ್ಮರಣಾನಂದರು ಭಾರತೀಯ ಆಧ್ಯಾತ್ಮಿಕತೆಯೆ ದಾರಿದೀಪವಾಗಿದ್ದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕಂಬನಿ ಮಿಡಿದಿದ್ದಾರೆ. ಈ ಮಹಾನ್ ಸನ್ಯಾಸಿ ತನ್ನ ಜೀವಿತಾವಧಿಯಲ್ಲಿ ಜಗತ್ತಿಗೆ ಆಧ್ಯಾತ್ಮಿಕ ನಾಯಕತ್ವ ನೀಡಿದ್ದಾರೆ. ಸ್ಮರಣಾನಂದರ ನಿಧನದಿಂದ ತುಂಬಾ ದುಃಖವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.