ಕುಂಬಳೆ: ಗ್ರಾಮ ಕಚೇರಿಗೆ ಹೋಗುವುದೆಂದರೆ ಒಂದು ದಿನದ ಕೆಲಸ ಎನ್ನುವುದು ಸಾಮಾನ್ಯವಾಗಿ ಜನರಾಡಿಕೊಳ್ಳುವ ಮಾತು. ಕುಂಬಳೆಯಲ್ಲಿರುವ ಕೊಯಿಪ್ಪಾಡಿ ಗ್ರಾಮ ಕಚೇರಿಗೆ ಹಾರಿಸ್ ಎನ್ನುವವರು ಗ್ರಾಮಾಧಿಕಾರಿಗಳಾಗಿ ಬಂದ ಒಂದೆರೆಡುವ ವರ್ಷದಿಂದೀಚೆ “ಕೊಯಿಪ್ಪಾಡಿ ಗ್ರಾಮ ಕಚೇರಿಯಲ್ಲಿ ಯಾವಾಗ ನೋಡಿದರೂ ಕಾದು ನಿಲ್ಲವ ಜನರು ಬಹಳ ವಿರಳ” ಎಂದು ಸಾರ್ವಜನಿಕರು ಆಡಿಕೊಳ್ಳಲು ಆರಂಭಿಸಿದರು. ಅದಕ್ಕೆ ಕಾರಣರಾದ ಹಾರಿಸ್ ಅವರ ಬಗ್ಗೆ ವಿಚಾರಿಸಿದಾಗ ಈಗಾಗಲೇ ಕೇರಳ ರಾಜ್ಯದಲ್ಲಿಯೇ ಅತ್ಯುತ್ತಮ ಗ್ರಾಮಾಧಿಕಾರಿ ಎಂಬ ಪ್ರಶಸ್ತಿಗೆ ಭಾಜನರಾದವರು ಅವರು ಎಂಬ ವಿಚಾರ ತಿಳಿಯುವಂತಾಯಿತು. ಅದರಲ್ಲೂ ಕೂಡ್ಲಿನಂಥ ವಿಶಾಲ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಗ್ರಾಮದ ಕಚೇರಿಯಲ್ಲಿ ಕಾರ್ಯವೆಸಗುವ ಸಮಯದಲ್ಲಿ ಅವರಿಗೆ ಈ ಪ್ರಶಸ್ತಿ ಬಂದಿರುವುದು ಗಮನಾರ್ಹ ವಿಷಯ.
ಇದೀಗ ಈ ವರ್ಷ ಮತ್ತೆ ಅವರನ್ನೇ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂಬುದು ಅವರ ನಿಷ್ಕಲ್ಮಶ ಸೇವಾ ತತ್ಪರತೆಗೆ ಸಾಕ್ಷಿಯಾಗಿದೆ. ಎರಡನೇ ಬಾರಿ ಪ್ರಶಸ್ತಿ ಬರಲಾರದು ಎಂದೂ ಸುದ್ದಿ ಹರಡಿದ್ದರೂ ಅದನ್ನೆಲ್ಲ ಹುಸಿ ಮಾಡುವಂತೆ ತನ್ನ ಕಾರ್ಯವೈಖರಿಯಿಂದ ಜನಮೆಚ್ಚುಗೆ ಗಳಿಸಿದ ಹಾರಿಸ್ ಅವರು ತಾನು ಸೇವೆ ಮಾಡುತ್ತಿರುವ ಕೊಯಿಪ್ಪಾಡಿ ಗ್ರಾಮ ಕಚೇರಿ ಕೇರಳ ರಾಜ್ಯದಲ್ಲೇ ಅತ್ಯುತ್ತಮ ಎಂಬ ನೆಗಳ್ತೆಗೆ ಪಾತ್ರವಾಗುವಂತೆ ಮಾಡಿದ್ದಾರೆ.
ಸೇವಾವಧಿಯಲ್ಲಿ ಅನಿವಾರ್ಯವಾದ ಮತ್ತು ಎಲ್ಲರೂ ಬಯಸುವ ಭಡ್ತಿ ಅವರನ್ನೂ ಹುಡುಕಿ ಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಉಪತಹಶೀಲ್ದಾರರಾಗಿ ಮಂಜೇಶ್ವರ ತಾಲೂಕು ಕಚೇರಿಗೆ ವರ್ಗಾವಣೆಯಾಗಿ ಹೋಗಲಿದ್ದಾರೆ. ಮುಂದೆಯೂ ಅವರು ಇತರ ಗ್ರಾಮಾಧಿಕಾರಿಗಳಿಗೆ ಮಾತ್ರವಲ್ಲ ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಮಾದರಿ.