ಕುಂಬಳೆ: ಆರಿಕ್ಕಾಡಿ ಪಾರೆ ಶ್ರೀ ಆಲಿಚಾಮುಂಡಿ ಕ್ಷೇತ್ರದಲ್ಲಿ ಮಾ 18ರಿಂದ 22ರ ವರೆಗೆ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಮಾ 30ರಿಂದ ಏ. 6ರ ವರೆಗೆ ವಾರ್ಷಿಕ ಕಳಿಯಾಟ ಮಹೋತ್ಸವ ಜರುಗಲಿರುವುದಾಗಿ ಕ್ಷೇತ್ರ ಜೀರ್ಣೋದ್ದರ ಸಮಿತಿ ಅಧ್ಯಕ್ಷ ಸುಕುಮಾರ ಎಂ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
1800ವರ್ಷಗಳ ಇತಿಹಾಸ ಹೊಮದಿರುವ ಕ್ಷೇತ್ರದಲ್ಲಿ ಪುನ:ಪ್ರತಿಷ್ಟಾ ಬ್ರಹ್ಮಕಲಶೋತ್ಸವ, ಶ್ರೀನಾಗದೇವರುಗಳು ಮತ್ತು ಗುಳಿಗ ದೈವದ ಪುನ:ಪ್ರತಿಷ್ಠೆ ಮಾ 18ರಿಂದ ಆರಂಭಗೊಳ್ಳುವುದು. ಬ್ರಹ್ಮಶ್ರೀ ಕಲ್ಕುಳಬೂಡು ಶಂಕರನಾರಾಯಣ ಕಡಮಣ್ಣಾಯ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿರುವುದು. 18ರಂದು ಬೆಳಗ್ಗೆ10ಕ್ಕೆ ಉಗ್ರಾಣ ಮುಹೂರ್ತ, ಸಂಜೆ 5.30ಕ್ಕೆ ತಂತ್ರಿವರ್ಯರ ಆಗಮನ, ವಿವಿಧ ವೈದಿಕ ಕಾರ್ಯಕ್ರಮ ಜರುಗುವುದು.
22ರಂದು ಬೆಳಗ್ಗೆ 9.30ರಿಂದ 11.42ರ ಮಧ್ಯೆ ಪಾರೆ ಶ್ರೀ ಐವರ್ ಭಗವತೀ, ಮಂತ್ರಮೂರ್ತಿ, ಕಾರ್ಯಕ್ಕಾರನ್(ಆಲಿ)ದೈವಗಳ ಪ್ರತಿಷ್ಠೆ, ಜೀವಕಲಶಾಭಿಷೇಕ, ತತ್ವ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಶ್ರೀನಾಗದೇವರು ಮತ್ತು ಗುಳಿಗ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪ್ರತಿಷ್ಠಾ ಬಲಿ ನಡೆಯುವುದು. ಮಾ. 30ರಿಂದ ಏ. 6ರ ವರೆಗೆ ವಾರ್ಷಿಕ ಕಳಿಯಾಟ ನಡೆಯುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟೀ ಚೇರ್‍ಮ್ಯಾನ್ ಸದಶಿವ ಜಿ, ಸಜಿತ್ ಆರಿಕ್ಕಾಡಿ, ಅಶೋಕ ಎಂ ಬಂಬ್ರಾಣ, ಕರುಣಾಕರ ಎಂ, ಪಿ. ಕೃಷ್ಣ ಮಾಸ್ಟರ್, ಸುಧಾಕರ ಬಿ ಉಪಸ್ಥಿತರಿದ್ದರು.