ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ 2019(CAA-2019) ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಸಹಾಯ ಮಾಡಲು ಶೀಘ್ರದಲ್ಲೇ ಸಹಾಯವಾಣಿಯನ್ನು ಆರಂಭಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ(MHA) ಬುಧವಾರ ತಿಳಿಸಿದೆ.
MHA ಪ್ರಕಾರ, ಅರ್ಜಿದಾರರು CAA-2019 ಗೆ ಸಂಬಂಧಿಸಿದ ಮಾಹಿತಿಯನ್ನು ಉಚಿತವಾಗಿ ಕರೆ ಮಾಡುವ ಮೂಲಕ ಪಡೆಯಬಹುದು.
'ಸಿಎಎ -2019 ರ ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಸಹಾಯ ಮಾಡಲು ಸಹಾಯವಾಣಿ ಸಂಖ್ಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಅರ್ಜಿದಾರರು ದೇಶದ ಯಾವುದೇ ಭಾಗದಿಂದಲೂ ಉಚಿತವಾಗಿ ಕರೆ ಮಾಡುವ ಮೂಲಕ CAA-2019 ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು. ಈ ಸೇವೆ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಲಭ್ಯವಿರುತ್ತದೆ' ಎಂಎಚ್‌ಎ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಸಂಸತ್ತಿನಲ್ಲಿ ಮಸೂದೆ ಅಂಗೀಕಾರಗೊಂಡ ನಾಲ್ಕು ವರ್ಷಗಳ ನಂತರ, ಲೋಸಭೆ ಚುನಾವಣೆಗೆ ಕೆಲವೇ ದಿನಗಳ ಮುನ್ನ ಕೇಂದ್ರ ಸರ್ಕಾರ ಬಹು ನಿರೀಕ್ಷಿತ ಪೌರತ್ವ ತಿದ್ದುಪಡಿ ಕಾಯ್ದೆ( ಸಿಎಎ) ಅನ್ನು ಜಾರಿಗೊಳಿಸಿ ಕಳೆದ ಸೋಮವಾರ ಆದೇಶ ಹೊರಡಿಸಿದೆ.
ಈ ಮೊದಲು 11 ವರ್ಷ ಭಾರತದಲ್ಲೇ ನೆಲೆಸಿದವರಿಗೆ ಪೌರತ್ವ ಪಡೆಯಲು ಅವಕಾಶವಿತ್ತು. ಆದರೆ ತಿದ್ದುಪಡಿ ಮೂಲಕ 11 ವರ್ಷದಿಂದ 5 ವರ್ಷಕ್ಕೆ ಇಳಿಸಲಾಗಿದ್ದು, ಮುಸ್ಲಿಮೇತರ ವ್ಯಕ್ತಿಗಳು 6 ವರ್ಷ ಕಾಲ ಅಥವಾ ಅದಕ್ಕೂ ಮೇಲ್ಪಟ್ಟು ಭಾರತದಲ್ಲೇ ವಾಸ ಮಾಡಿದ್ದರೆ ಅಂಥವರಿಗೆ ಪೌರತ್ವ ನೀಡಲಾಗುತ್ತದೆ. ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್, ಪಾರ್ಸಿಗಳಿಗೆ ಪೌರತ್ವ ನೀಡಲಾಗುತ್ತದೆ.