ವಿಶ್ವಸಂಸ್ಥೆ: ಅಫ್ಗಾನಿಸ್ತಾನದಲ್ಲಿ ದೀರ್ಘಾವಧಿಯ ಶಾಂತಿ, ಭದ್ರತೆ ಮತ್ತು ಸ್ಥಿರತೆ ಸ್ಥಾಪಿಸುವುದು ಭಾರತದ ಉದ್ದೇಶವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ತಿಳಿಸಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಫ್ಗಾನಿಸ್ತಾನ ಕುರಿತು ನಡೆದ ಚರ್ಚೆಯ ವೇಳೆ ಭಾಗವಹಿಸಿ ಮಾತನಾಡಿದ ಅವರು, ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಸಮುದಾಯದ ಬಹುತೇಕ ಉದ್ದೇಶಗಳು ಭಾರತದ ಆದ್ಯತೆಗಳೊಂದಿಗೆ ಹೊಂದಿಕೆಯಾಗುತ್ತವೆ ಎಂದರು.
'ನಮ್ಮ ಮೇಲೆ ನೇರ ಪರಿಣಾಮ ಬೀರುವ ದೇಶಗಳ ಪರಿಸ್ಥಿತಿಯನ್ನು ನವದೆಹಲಿಯು ಸೂಕ್ಷ್ಮವಾಗಿ ಗಮನಿಸುತ್ತದೆ' ಎಂದು ಅವರು ತಿಳಿಸಿದರು.
'ಭಯೋತ್ಪಾದನೆ ಎದುರಿಸುವುದು, ಎಲ್ಲರನ್ನೂ ಒಳಗೊಳ್ಳುವ ಆಡಳಿತ, ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡುವುದು, ಮಾದಕ ವಸ್ತುಗಳ ವಿರುದ್ಧ ಮತ್ತು ದೇಶದ ಜನರ ಯೋಗಕ್ಷೇಮಕ್ಕಾಗಿ ಮಾನವೀಯ ನೆರವು ಒದಗಿಸುವುದು ನಮ್ಮ ಆದ್ಯತೆಯಾಗಿದೆ' ಎಂದು ಅವರು ವಿವರಿಸಿದರು.
ಇತ್ತೀಚೆಗೆ ಕತಾರ್‌ನಲ್ಲಿ ನಡೆದಿದ್ದ ಅಫ್ಗಾನಿಸ್ತಾನದ ವಿಶೇಷ ರಾಯಭಾರಿಗಳ ಸಭೆಯಲ್ಲಿ ಭಾರತವು ಸಕ್ರಿಯವಾಗಿ ಪಾಲ್ಗೊಂಡಿತ್ತು ಎಂದು ಅವರು ಇದೇ ವೇಳೆ ತಿಳಿಸಿದರು.