ನವದೆಹಲಿ: ಸಂಸತ್ತಿನ ಭದ್ರತಾ ಲೋಪ ಪ್ರಕರಣದ ತನಿಖೆಗಾಗಿ ದೆಹಲಿ ಪೊಲೀಸರಿಗೆ ನಗರದ ನ್ಯಾಯಾಲಯವು ಸೋಮವಾರ ಕಾಲಾವಕಾಶ ವಿಸ್ತರಣೆ ಮಾಡಿದೆ.
ಕೆಲವು ವರದಿಗಳು ಇನ್ನೂ ಕೈಸೇರಿಲ್ಲ ಹಾಗೂ ಬೃಹತ್ ದತ್ತಾಂಶದ ಪರಿಶೀಲನೆಗೆ ಹೆಚ್ಚಿನ ಸಮಯದ ಅಗತ್ಯವಿರುವುದರಿಂದ ತನಿಖೆಗೆ ಇನ್ನೂ ಮೂರು ತಿಂಗಳು ಕಾಲಾವಕಾಶ ಬೇಕು ಎಂದು ದೆಹಲಿ ಪೊಲೀಸ್ ಪರ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆಯಾದ ಹರ್‌ದೀಪ್ ಕೌರ್, ಪ್ರಕರಣದ ತನಿಖೆಗಾಗಿ 45 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದರು.
ಕಾನೂನಿನ ಪ್ರಕಾರ ತನಿಖಾ ಸಂಸ್ಥೆಯು ನಿಗದಿತ ಮೂರು ತಿಂಗಳ ಒಳಗೆ ಪ್ರಕರಣದ ತನಿಖೆ ಪೂರ್ಣಗೊಳಿಸದಿದ್ದರೆ, ಕಸ್ಟಡಿಯಲ್ಲಿರುವ ಆರೋಪಿಗಳಿಗೆ ಜಾಮೀನು ಪಡೆಯುವ ಶಾಸನಬದ್ಧ ಹಕ್ಕು ಪ್ರಾಪ್ತವಾಗುತ್ತದೆ.
ಸಂಸತ್ ಮೇಲಿನ ದಾಳಿ ಪ್ರಕರಣದ 22ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾಗರ್ ಶರ್ಮಾ ಮತ್ತು ಡಿ.ಮನೋರಂಜನ್ ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದರು. ಘೋಷಣೆಗಳನ್ನು ಕೂಗುತ್ತಾ 'ಸ್ಮೋಕ್ ಕ್ಯಾನ್' ಹಾರಿಸಿ ದಾಂದಲೆ ಎಬ್ಬಿಸಿದ್ದರು. ಅದೇ ಸಮಯಕ್ಕೆ ಸಂಸತ್ ಭವನದ ಹೊರಗೆ ಅಮೋಲ್ ಶಿಂದೆ ಮತ್ತು ನೀಲಂ ಆಜಾದ್ ಬಣ್ಣದ ಹೊಗೆ ಹಾರಿಸಿ ಘೋಷಣೆ ಕೂಗಿದ್ದರು. ಅವರ ಜತೆಗೆ ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರೂ ಪ್ರಸ್ತುತ ಜೈಲಿನಲ್ಲಿದ್ದಾರೆ.