ನವದೆಹಲಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ನೆಲೆಸಲು ಮಾತುಕತೆಯೊಂದೇ ದಾರಿ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಅಲ್ಲದೆ ರಾಜ್ಯವನ್ನು ಸಹಜ ಪರಿಸ್ಥಿತಿಗೆ ಮರಳುವಂತೆ ಮಾಡುವುದು ಕೇಂದ್ರ ಸರ್ಕಾರದ ಮುಂದಿನ ಪ್ರಯತ್ನದ ಭಾಗವಾಗಿರಲಿದೆ ಎಂದಿದ್ದಾರೆ.

'ಮಣಿಪುರದ ಸಮಸ್ಯೆಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ದಂಗೆಯಲ್ಲ. ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷವಾಗಿದೆ' ಎಂದು ಅವರು ನುಡಿದಿದ್ದಾರೆ.
'ಮಣಿಪುರದಲ್ಲಿ ಶಾಂತಿ ನೆಲೆಸಬೇಕು ಎಂದು ಯಾರಾದರೂ ಬಯಸುವುದಾದರೆ, ಶಸ್ತ್ರಾಸ್ತ್ರ ಎತ್ತಿಕೊಳ್ಳಬೇಡಿ ಎಂದು ಮೈತೇಯಿ ಹಾಗೂ ಕುಕಿ ಸಮುದಾಯದವರೊಂದಿಗೆ ವಿನಂತಿಸಿಕೊಳ್ಳಿ. ಶಸ್ತ್ರಾಸ್ತ್ರ ಹೋರಾಟದಿಂದ ಪರಿಹಾರ ಅಸಾಧ್ಯ. ಮಾತುಕತೆಯಿಂದಾಗಿ ಶಾಂತಿ ಮರಳಲು ಸಾಧ್ಯ' ಎಂದು ಅವರು ಹೇಳಿದ್ದಾರೆ.
ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆ ಹಾಗೂ ಸಂಸತ್‌ನಲ್ಲೂ ಶಾಂತಿ ಕಾಪಾಡಲು ಮನವಿ ಮಾಡಿದ್ದರು ಎಂದು ರಿಜಿಜು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ನಾಲ್ಕು ದಿನ ಮಣಿಪುರದಲ್ಲಿ ಇದ್ದರು. ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ 22 ದಿನ ಇದ್ದು, ವಿವಿಧ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು ಎಂದು ರಿಜಿಜು ತಿಳಿಸಿದ್ದಾರೆ.
ಮೈತೇಯಿಗಳಿಗೆ ಮಣಿಪುರ ಹೈಕೋರ್ಟ್ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡಿದ್ದರಿಂದ ಈ ಕಲಹ ಉಂಟಾಗಿದೆ ಎಂದು ರಿಜಿಜು ಅಭಿಪ್ರಾಯಪಟ್ಟಿದ್ದಾರೆ. ಈ ಸಂಘರ್ಷದಲ್ಲಿ ಈವರೆಗೆ 219 ಮಂದಿ ಸಾವಿಗೀಡಾಗಿದ್ದಾರೆ.