ಕಾಸರಗೋಡು: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ತೆಗೆದು, ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಯುವಕ ನಿಗೂಢವಾಗಿ ಸಾವಿಗೀಡಾಗಿದ್ದಾನೆ. ಮೀಯಪದವು ಮದಕ್ಕಳ ನಿವಾಸಿ ಮೊಯ್ದೀನ್ ಆರಿಫ್(22)ಎಂಬಾತ ಮೃತಪಟ್ಟ ವ್ಯಕ್ತಿ.ಗಾಂಜಾ ಸೇವಿಸಿ ಗಲಭೆ ನಡೆಸಿದ ಹಿನ್ನೆಲೆಯಲ್ಲಿ ಈತನನ್ನು ಮಂಜೇಶ್ವರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದರು.
ನಂತರ ಅಬ್ದುಲ್ ರಶೀದ್ ಎಂಬವರು ಮೊಯ್ದೀನ್ ಆರಿಫ್‍ನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿ, ಬೈಕಿನಲ್ಲಿ ಕರೆದೊಯ್ದಿದ್ದರು. ಸೋಮವಾರ ಮೊಯ್ದೀನ್ ಆರಿಫ್ ತನ್ನ ಮನೆಯಲ್ಲಿ ರಕ್ತವಾಂತಿ ನಡೆಸಿದ ಹಿನ್ನೆಲೆಯಲ್ಲಿ ಈತನನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮೃತದೇಹ ಮನೆಗೆ ಕರೆತಂದಾಗ ದೇಹದಲ್ಲಿ ಕೆಲವೊಂದು ಗಾಯದ ಗುರುತುಗಳಿದ್ದುದನ್ನು ಸಂಬಂಧಿಕರು ಗುರುತಿಸಿ, ಅಂತ್ಯಸಂಸ್ಕಾರ ನಡೆಸದಂತೆ ಸೂಚಿಸಿದ್ದರು. ನಂತರ ಪೊಲಿಸರು ಅಸಹಜ ಸಾವಿನ ಬಗ್ಗೆ ಕೇಸು ದಾಖಲಿಸಿಕೊಂಡಿದ್ದು, ತನಿಖೆ ಹಿನ್ನೆಲೆಯಲ್ಲಿ ಠಾಣೆಯಿಂದ ಈತನನ್ನು ಬೈಕಲ್ಲಿ ಕರೆದೊಯ್ದಿದ್ದ ಅಬ್ದುಲ್‍ರಶೀದ್‍ನನ್ನು ವಿಚಾರಣೆಗೊಳಪಡಿಸಿದಾಗ ಸಂಚರಿಸುತ್ತಿದ್ದ ಬೈಕಿನಿಂದ ಮೊಯ್ದೀನ್‍ಆರಿಫ್ ಹಾರಿದ್ದು, ಇದರಿಂದ ಗಾಯಗಳುಂಟಾಗಿರುವುದಾಗಿ ತಿಳಿಸಿದ್ದರು. ಆದರೆ ಹೇಳಿಕೆ ಬಗ್ಗೆ ನಿಗೂಢತೆಗಳಿರುವುದರಿಂದ ಉನ್ನತಶವಮಹಜರಿಗಾಗಿ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಮಡಿದ್ದಾರೆ.