ಗ್ವಾಲಿಯರ್: ಮಧ್ಯಪ್ರದೇಶದ ಧರ್ ಜಿಲ್ಲೆಯಲ್ಲಿ ಇರುವ ವಿವಾದಿತ ಭೋಜಶಾಲಾ/ಕಮಲ ಮೌಲಾ ಮಸೀದಿ ಸಂಕೀರ್ಣವು ಸರಸ್ವತಿಯ ದೇವಸ್ಥಾನ ಆಗಿತ್ತು, ಅದನ್ನು ನಂತರದಲ್ಲಿ ಇಸ್ಲಾಮಿಕ್ ಪ್ರಾರ್ಥನಾ ಸ್ಥಳವನ್ನಾಗಿ ಪರಿವರ್ತಿಸಲಾಯಿತು ಎಂದು ಖ್ಯಾತ ಪುರಾತತ್ವಶಾಸ್ತ್ರಜ್ಞ ಕೆ.ಕೆ. ಮುಹಮ್ಮದ್ ಹೇಳಿದ್ದಾರೆ.
ಇಂತಹ ಸ್ಥಳಗಳ ವಿಚಾರವಾಗಿ ಹಿಂದೂಗಳು ಮತ್ತು ಮುಸ್ಲಿಮರು ನ್ಯಾಯಾಲಯ ನೀಡುವ ಆದೇಶವನ್ನು ಪಾಲಿಸಬೇಕು, ಪೂಜಾ ಸ್ಥಳಗಳ ಕಾಯ್ದೆ-1991 ಅನ್ನು ಗೌರವಿಸಬೇಕು, ಒಟ್ಟಾಗಿ ಕುಳಿತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಮಥುರಾ ಮತ್ತು ಕಾಶಿಯ ವಿಚಾರವಾಗಿ ಹಿಂದೂಗಳ ಭಾವನೆಯನ್ನು ಗೌರವಿಸುವ ಕೆಲಸವನ್ನು ಮುಸ್ಲಿಮರು ಮಾಡಬೇಕು ಎಂದು ಕೂಡ ಮುಹಮ್ಮದ್ ಅವರು ಭಾನುವಾರ ಹೇಳಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ವಿವಾದಿತ ಭೋಜಶಾಲಾ ಸಂಕೀರ್ಣದ ಸಮೀಕ್ಷೆಯನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಸೂಚನೆಯ ಅನುಸಾರ ನಡೆಸುತ್ತಿದೆ. ಅಲ್ಲಿ ಇರುವುದು ವಾಗ್ದೇವಿ (ಸರಸ್ವತಿ) ದೇವಸ್ಥಾನ ಎಂಬುದು ಹಿಂದೂಗಳ ನಂಬಿಕೆ. ಅದು ಕಮಲ ಮೌಲಾ ಮಸೀದಿ ಎಂದು ಮುಸ್ಲಿಮರು ನಂಬುತ್ತಾರೆ.
'ಭೋಜಶಾಲಾ ಸರಸ್ವತಿಯ ದೇವಸ್ಥಾನ ಆಗಿತ್ತು ಎಂಬುದು ಅದರ ಕುರಿತ ಐತಿಹಾಸಿಕ ಸತ್ಯ. ಅದನ್ನು ಇಸ್ಲಾಮಿಕ್ ಮಸೀದಿಯಾಗಿ ಪರಿವರ್ತಿಸಲಾಯಿತು. ಆದರೆ, ಪೂಜಾ ಸ್ಥಳಗಳ ಕಾಯ್ದೆ-1991ರ ಅನ್ವಯ 1947ರಲ್ಲಿ ಅದು ಮಸೀದಿಯಾಗಿತ್ತು ಎಂದಾದರೆ ಅದು ಮಸೀದಿಯೇ ಆಗುತ್ತದೆ, 1947ರಲ್ಲಿ ಅದು ದೇವಸ್ಥಾನ ಆಗಿತ್ತು ಎಂದಾದರೆ ಅದು ದೇವಸ್ಥಾನವೇ ಆಗುತ್ತದೆ' ಎಂದು ಮುಹಮ್ಮದ್ ಅವರು ವಿವರಿಸಿದ್ದಾರೆ.
1976-77ರಲ್ಲಿ ಅಯೋಧ್ಯೆಯಲ್ಲಿ ಉತ್ಖನನ ನಡೆಸಿದ ಪ್ರೊಫೆಸರ್ ಬಿ.ಬಿ. ಲಾಲ್ ಅವರ ತಂಡದಲ್ಲಿ ಮುಹಮ್ಮದ್ ಅವರೂ ಇದ್ದರು. ಬಾಬರಿ ಮಸೀದಿಯ ಅಡಿಯಲ್ಲಿ ರಾಮ ಮಂದಿರದ ಅವಶೇಷ ಇದ್ದಿದ್ದನ್ನು ಮೊದಲು ಕಂಡಿದ್ದು ತಾವು ಎಂದು ಮುಹಮ್ಮದ್ ಅವರು ಈ ಮುನ್ನ ಹೇಳಿದ್ದರು.
'ಎರಡೂ ಸಮುದಾಯಗಳು ಕಾಯ್ದೆಗೆ ಬದ್ಧತೆ ತೋರಬೇಕು. ಎಲ್ಲ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಹೈಕೋರ್ಟ್ ಒಂದು ತೀರ್ಮಾನ ನೀಡುತ್ತದೆ. ಅದನ್ನು ಎಲ್ಲರೂ ಪಾಲಿಸಬೇಕು. ಅದೊಂದೇ ಪರಿಹಾರ' ಎಂದು ಅವರು ಹೇಳಿದ್ದಾರೆ. ಆ ಸ್ಥಳವು ಸರಸ್ವತಿಯ ದೇವಸ್ಥಾನ ಆಗಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಕೂಡ ಮುಹಮ್ಮದ್ ಸ್ಪಷ್ಟವಾಗಿ ಹೇಳಿದ್ದಾರೆ.
ಎಲ್ಲರಿಗೂ ಸಮಸ್ಯೆ ಸೃಷ್ಟಿಸುವ ಯಾವುದೇ ಕೆಲಸವನ್ನು ಎರಡೂ ಕಡೆಯವರು ಮಾಡಬಾರದು ಎಂದು ಅವರು ಕಿವಿಮಾತು ಹೇಳಿದ್ದಾರೆ.
ಮುಸ್ಲಿಮರಿಗೆ ಮೆಕ್ಕಾ ಮತ್ತು ಮದೀನಾ ಎಷ್ಟು ಮುಖ್ಯವೋ, ಮಥುರಾ ಮತ್ತು ಕಾಶಿ ಹಿಂದೂಗಳಿಗೆ ಅಷ್ಟೇ ಮುಖ್ಯ ಎಂದು ಮುಹಮ್ಮದ್ ಹೇಳಿದ್ದಾರೆ. 'ಹಿಂದೂಗಳ ಭಾವನೆಯನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು. ಕಾಶಿಯು ಶಿವನೊಂದಿಗೆ ನಂಟು ಹೊಂದಿದೆ, ಮಥುರಾ ಶ್ರೀಕೃಷ್ಣನ ಜನ್ಮಸ್ಥಳ. ಇವನ್ನು ಹಿಂದೂಗಳು ಬೇರೊಂದು ಸ್ಥಳಕ್ಕೆ ವರ್ಗಾಯಿಸಲು ಆಗುವುದಿಲ್ಲ. ಆದರೆ ಇವು ಮುಸ್ಲಿಮರ ಪಾಲಿಗೆ ಮಸೀದಿಗಳು ಮಾತ್ರ. ಇವು ಪ್ರವಾದಿ ಮೊಹಮ್ಮದ್ ಅವರೊಂದಿಗಾಗಲಿ, ಔಲಿಯಾಗಳೊಂದಿಗಾಗಲಿ ನೇರವಾಗಿ ಸಂಬಂಧ ಹೊಂದಿಲ್ಲ. ಇವುಗಳನ್ನು ಬೇರೆಡೆ ಸ್ಥಳಾಂತರಿಸಬಹುದು' ಎಂದು ಅವರು ಹೇಳಿದ್ದಾರೆ.
'ಹಿಂದೂಗಳು ತಾವು ಪೂಜಾ ಸ್ಥಳಗಳ ದೊಡ್ಡ ಪಟ್ಟಿಯೊಂದನ್ನು ಹಿಡಿದುಕೊಂಡು ಬರುವುದು ಸಲ್ಲದು ಎಂಬುದನ್ನು ಕೂಡ ಪರಿಗಣನೆಯಲ್ಲಿ ಇಟ್ಟುಕೊಳ್ಳಬೇಕು. ನಾವು ದೇಶವನ್ನು ಬಲಪಡಿಸಬೇಕು, ದೇಶವನ್ನು ಮುಂದಕ್ಕೆ ಒಯ್ಯಬೇಕು. ಇದಕ್ಕಾಗಿ ಎರಡೂ ಸಮುದಾಯಗಳು ಒಟ್ಟಾಗಿ ಮಾತುಕತೆ ನಡೆಸಬೇಕು' ಎಂದು ಅವರು ಹೇಳಿದ್ದಾರೆ.
ವಿವಾದಗಳನ್ನು ಎರಡೂ ಸಮುದಾಯಗಳು ಬಗೆಹರಿಸಿಕೊಳ್ಳದೆ ಇದ್ದರೆ ದೊಡ್ಡ ಸಮಸ್ಯೆ ಉಂಟಾಗುತ್ತದೆ ಎಂದು ಕೂಡ ಅವರು ಎಚ್ಚರಿಸಿದ್ದಾರೆ.