ನವದೆಹಲಿ: ದೋಷಾರೋಪ ನಿಗದಿ ಮಾಡಲಾಗುತ್ತಿರುವ ಹಂತದಲ್ಲಿ, ಆರೋಪಗಳ ಸ್ಪರೂಪವನ್ನೇ ಪರಿಗಣಿಸಬೇಕು ಎಂದಿರುವ ದೆಹಲಿಯ ನ್ಯಾಯಾಲಯವೊಂದು, ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯು ತನ್ನ ವಿರುದ್ಧ ದೋಷಾರೋಪ ನಿಗದಿ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಪ್ರಕರಣವೊಂದರ ಕುರಿತು ಸೋಮವಾರ ಹೊರಡಿಸಿರುವ ಆದೇಶದಲ್ಲಿ ಇದನ್ನು ಹೇಳಿದ್ದಾರೆ.
ತನ್ನ ವಿರುದ್ಧ ಮ್ಯಾಜಿಸ್ಟರಿಯಲ್ ಕೋರ್ಟ್, ಐಪಿಸಿ ಸೆಕ್ಷನ್ 354, 509, 506 ಹಾಗೂ 452ರ ಅಡಿ ದೋಷಾರೋಪ ನಿಗದಿ ಮಾಡುವಂತೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಆರೋಪಿ ಮೇಲ್ಮನವಿ ಸಲ್ಲಿಸಿದ್ದರು.
'ಯಾವುದೇ ಪ್ರಕರಣದಲ್ಲಿ ಹೊರಡಿಸಿರುವ ಆದೇಶವು ದೋಷಪೂರಿತವಾಗಿದ್ದಾಗ, ನ್ಯಾಯಾಧೀಶರು ಮನಸೋಇಚ್ಛೆಯಿಂದ ವಿವೇಚನೆ ಬಳಸಿ ಆದೇಶವನ್ನು ಹೊರಡಿಸಿದ್ದಾಗ, ಸಾಕ್ಷ್ಯಗಳ ಆಧಾರ ಮತ್ತು ಕಾಯ್ದೆ ಅನುಸಾರ ಇಲ್ಲದಿದ್ಧಾಗ ಮಾತ್ರ ಮರುಪರಿಶೀಲನಾ ಅರ್ಜಿಯನ್ನು ಕೋರ್ಟ್‌ಗಳು ಸ್ವೀಕರಿಸಬೇಕು' ಎಂದು ನ್ಯಾಯಾಧೀಶ ಪ್ರಮಾಚಲ ಅವರು ಆದೇಶದಲ್ಲಿ ತಿಳಿಸಿದ್ದಾರೆ.
'ಈ ಪ್ರಕರಣದಲ್ಲಿ ನಿಗದಿ ಮಾಡಿರುವ ಆರೋಪಗಳು ಕಾನೂನುಬಾಹಿರ ಅಥವಾ ಅಸಂಬದ್ಧ ಎಂದು ನನಗೆ ಅನಿಸುತ್ತಿಲ್ಲ. ನಿಗದಿ ಮಾಡಲಾಗಿರುವ ಆರೋಪಗಳನ್ನು ಸಮರ್ಥಿಸಿ ಪ್ರಾಸಿಕ್ಯೂಷನ್ ನೀಡಿರುವ ವಿವರಣೆಗಳು ಹಾಗೂ ದೂರುದಾರರು ಮಾಡಿರುವ ಆರೋಪಗಳ ಸ್ವರೂಪ ಪರಿಗಣಿಸಿದಾಗ, ಪ್ರತಿವಾದಿ ಸಲ್ಲಿಸಿರುವ ಅರ್ಜಿಯು ಸ್ವೀಕರಿಸಲು ಅರ್ಹವಲ್ಲ' ಎಂದೂ ಅವರು ಆದೇಶದಲ್ಲಿ ಹೇಳಿದ್ದಾರೆ.