ಕಾಸರಗೋಡು:ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಎದುರಿಸುತ್ತಿರುವ ಭೀಕರತೆಯನ್ನು ಚಿತ್ರಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಎದುರು ನಿರ್ಮಾಣಗೊಳ್ಳುತ್ತಿರುವ ಕಾಂಕ್ರೀಟ್ ಶಿಲ್ಪದ ಕೆಲಸ ಪುನಾರಂಭಿಸಲಾಗಿದೆ. 2005ರಲ್ಲಿ ಆರಂಭಗೊಂಡಿರುವ ಕಾಂಕ್ರೀಟ್ ಶಿಲ್ಪದ ಕೆಲಸ ಹಲವು ಬಾರಿ ಸ್ಥಗಿತಗೊಂಡಿದ್ದು, ಬಹುತೇಕ ಪೂರ್ತಿಗೊಂಡಿದ್ದರೂ, ಅಂತಿಮ ಹಂತದ ಕೆಲಸವನ್ನು ಮತ್ತೆ ಕೈಗೆತ್ತಿಕೊಳ್ಳಲಾಗಿದೆ.
2008ರಲ್ಲಿ ಅಂದಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ ಬಾಲಕೃಷ್ಣನ್ ನೇತೃತ್ವದಲ್ಲಿ ಆರಂಭಗೊಂಡಿದ್ದ ಕಾಂಕ್ರೀಟ್ ಶಿಲ್ಪ ಕಲೆ ಕಾಮಗಾರಿ ಒಂದೂವರೆ ದಶಕ ಕಳೆದರೂ ಪೂರ್ತಿಗೊಳ್ಳದಿರುವ ಬಗ್ಗೆ ಎಂಡೋಸಲ್ಪಾನ್ ಸಂತ್ರಸ್ತರೂ ಸೇರಿದಂತೆ ಜಿಲ್ಲೆಯಜನತೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಪ್ರಮುಖ ಶಿಲ್ಪಿ ಕಾನಾಯಿ ಕುಞÂರಾಮನ್ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಕಾಂಕ್ರೀಟ್ ಶಿಲ್ಪ, ಜಿಲ್ಲೆಯ ಎಂಡೋಸಲ್ಫಾಣ್ ದುಷ್ಪರಿಣಾಮಪೀಡಿತ ಕಂದಮ್ಮಗಳ ತಾಯಿಯ ರೋದನವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಿರ್ಮಿಸಲಾಗಿದೆ. ಕಾಂಕ್ರೀಟ್ ಶಿಲ್ಪದಲ್ಲಿ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತ ಇಬ್ಬರು ಮಕ್ಕಳು ಅಳುತ್ತಿರುವುದು ಹಾಗೂ ತಾಯಿಯೊಬ್ಬಳು ಹೋರಾಟದ ಸಂಕೇತವಾಗಿ ಕೈಮೇಲಕ್ಕೆತ್ತಿ ಮುಷ್ಟಿಹಿಡಿದು ಯಾಚಿಸುತ್ತಿರುವ ದೃಶ್ಯವನ್ನು ಚಿತ್ರಿಸಲಾಗಿದೆ.
ಇನ್ನೊಂದು ಶಿಲ್ಪದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಸಹಭಾಗಿತ್ವ, ಜಿಲ್ಲೆಯ ಸಾಂಸ್ಕøತಿಕ ಪರಂಪರೆಯನ್ನು ಬಿಂಬಿಸಲಾಗಿದೆ. ರಾಜ್ಯದಲ್ಲೇ ಅತಿ ಎತ್ತರದ ಕಾಂಕ್ರಿಟ್ ಶಿಲ್ಪ ಇದಾಗಿದೆ. ಕಾಂಕ್ರೀಟ್ ಶಿಲ್ಪ 45ಅಡಿ ಎತ್ತರ ಹೊಂದಿದೆ. 2008ರಲ್ಲಿ 20ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಶಿಲ್ಪ ನಿರ್ಮಾಣಕ್ಕೆ ಯೋಜನೆ ತಯಾರಿಸಿದ್ದರೂ, ಈ ಮೊತ್ತ ಇಂದು 40ಲಕ್ಷದ ಅಂಚಿಗೆ ತಲುಪಿದೆ. ಮೊತ್ತ ಲಭ್ಯತೆ ವಿಳಂಬ ಹಿನ್ನೆಲೆಯಲ್ಲಿ ಹಲವು ಬಾರಿ ಕಾಮಗಾರಿ ಸ್ಥಗಿತಗೊಳಿಸಬೇಕಾಗಿ ಬಂದಿದೆ.
ಶಿಲ್ಪಕ್ಕೆ ಅಪಸ್ವರ:
ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಸಂಕಷ್ಟದಲ್ಲಿರುವಾಗ ಲಕ್ಷಾಂತರ ರೂ. ವೆಚ್ಚದಲ್ಲಿ ಶಿಲ್ಪ ನಿರ್ಮಾಣದ ಅಗತ್ಯವೇನು ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ. ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಪ್ರತೀಕವಾಗಿ 2008ರಲ್ಲಿ ಆರಂಭಿಸಿದ ಕಾಮಗಾರಿಯನ್ನು ಶೀಘ್ರ ಪೂರ್ತಿಗೊಳಿಸದಿರುವುದರ ಹಿಂದೆ ಆಡಳಿತಪಕ್ಷದ ಹಿಡನ್ ಅಜೆಂಡಾ ಒಳಗೊಂಡಿರುವುದಾಗಿ ಆರೋಪ ಕೇಳಿಬರುತ್ತಿದೆ. ಕಾಮಗಾರಿ ಶೀಘ್ರ ಪೂರ್ತಿಗೊಳಿಸಿದಲ್ಲಿ, ಜಿಲ್ಲೆಯಲ್ಲಿ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಅಸ್ತಿತ್ವವನ್ನು ಸ್ವತ: ಸರ್ಕಾರವೇ ಒಪ್ಪಿಕೊಂಡಂತಾಗುತ್ತದೆ ಎಂಬ ಭೀತಿಯೂ ಸರ್ಕಾರಕ್ಕೆ ಒಳಗಿಂದೊಳಗೆ ಕಾಡಲಾರಂಭಿಸಿದೆ ಎಂಬುದು ಎಂಡೊಸಲ್ಪಾಣ್ ವಿರೋಧಿ ಹೋರಟಗಾರರೊಬ್ಬರ ಅಭಿಪ್ರಾಯವಾಗಿದೆ.
ಸುಮಾರು 20ಲಕ್ಷ ರೂ. ವೆಚ್ಚದಲ್ಲಿ ಆರಂಭಿಸಿದ ಯೋಜನೆ ಇಂದು 40ಲಕ್ಷದ ವರೆಗೆ ಬಂದು ನಿಂತಿದೆ. ಹಲವು ಬಾರಿ ಸ್ಥಗಿತಗೊಳಿಸಲಾಗಿದ್ದ ಶಿಲ್ಪದ ಕಾಮಗಾರಿಯನ್ನು ಖುದ್ದು ಶಿಲ್ಪಿ ಕಾನಾಯಿ ಕುಞÂರಾಮನ್ ಅವರ ನೇತೃತ್ವದಲ್ಲೇ ನಡೆಸಲಾಗುತ್ತಿದೆ.
ಪ್ರಸಿದ್ಧ ಶಿಲ್ಪಿ:
ಕಾಸರಗೋಡು ಜಿಲ್ಲೆಯ ಚೆರ್ವತ್ತೂರು ಕುಟ್ಟಮ್ಮತ್ ವಿವಾಸಿ ಕಾನಾಯಿ ಕುಞÂರಾಮನ್ ಖ್ಯಾತ ಕಾಂಕ್ರೀಟ್ ಶಿಲ್ಪ ಕಲಾವಿದರಾಗಿ ಹೆಸರು ಗಳಿಸಿದ್ದಾರೆ. 1965ರಲ್ಲಿ ಮದ್ರಾಸ್‍ನಲ್ಲಿ ಶಿಲ್ಪಕಲೆಯ ಬಗ್ಗೆ ತರಬೇತಿ ಪಡೆದಿರುವ ಇವರಿಗೆ ಬ್ರಿಟಿಷ್ ಸರ್ಕಾರದಿಂದ ಸ್ಕಾಲರ್‍ಶೀಪ್ ಲಭಿಸಿತ್ತು. ಇವರ ಅದ್ಭುತ ಶಿಲ್ಪಕಲೆಯನ್ನು ಮೆಚ್ಚಿ 1982ರಲ್ಲಿ ಅಮೆರಿಕಾ ತನ್ನ ಸ್ಟೇಟ್ ಗೆಸ್ಟ್ ಆಗಿ ಒಂದುವರೆ ತಿಂಗಳ ಕಾಲ ಅಮೆರಿಕಾದ ನಾನಾ ಕಡೆ ಪ್ರವಾಸಕ್ಕೆ ಅವಕಾಶ ಕಲ್ಪಿಸಿತ್ತು. ಮಲಪ್ಪುರಂನ ಶಂಖುಮುಖದಲ್ಲಿ ಇವರು ನಿರ್ಮಿಸಿರುವ ಅದ್ಭುತ ಶಿಲ್ಪಕಲೆ ಹೆಚ್ಚಿನ ಖ್ಯಾತಿಯನ್ನು ತಂದುಕೊಟ್ಟಿದೆ. ಕೇರಳದ ವಿವಿಧೆಡೆ ಅಲ್ಲದೆ ಮುಂಬೈ, ದೆಹಲಿ ಸೇರಿದಂತೆ ದೇಶದ ನಾನಾ ಕಡೆ ಇವರ ಶಿಲ್ಪಕಲೆ ನಿರ್ಮಾಣಗೊಂಡಿದೆ.
ಅಭಿಮತ: ಶಿಲ್ಪ ನಿರ್ಮಾಣದ ಜತೆಗೆ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಅಳಲು ಆಲಿಸಲೂ ಸರ್ಕಾರ ಮುಂದಾಗಬೇಕು. ಹಲವಾರು ಮಂದಿ ಸಂತ್ರಸ್ತರು ಇನ್ನೂ ಸವಲತ್ತುಗಳಿಂದ ವಂಚಿತರಾಗಿದ್ದು, ಸಂತ್ರಸ್ತರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಇವರಿಗೆ ಅಗತ್ಯ ಚಿಕಿತ್ಸೆಯೂ ಲಭ್ಯವಾಗುತ್ತಿಲ್ಲ. ಸಂತ್ರಸ್ತರನ್ನು ಮತ್ತೆ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಕಾಞಂಗಾಡಿನಲ್ಲಿ ನಡೆಯುತ್ತಿರುವ ಸತ್ಯಾಗ್ರಹ 60ನೇ ದಿನಕ್ಕೆ ಕಾಲಿರಿಸಿದೆ. ಅಧಿಕಾರಿಗಳು ಸಂತ್ರಸ್ತರ ಬಗ್ಗೆ ಕರುಣೆ ತೋರಬೇಕು.
ಅಂಬಲತ್ತರ ಕುಞಕೃಷ್ಣನ್, ಕಾರ್ಯದರ್ಶಿ
ಎಂಡೋಸಲ್ಫಾನ್ ಸಂತ್ರಸ್ತರ ಒಕ್ಕೂಟ