ನವದೆಹಲಿ: ಸರ್ಕಾರ, ಸಾರ್ವಜನಿಕ ಹಾಗೂ ಖಾಸಗಿ ಸ್ವತ್ತುಗಳಲ್ಲಿ ಅನಧಿಕೃತವಾಗಿ ಅಳವಡಿಸಲಾದ ರಾಜಕೀಯ ಜಾಹೀರಾತುಗಳನ್ನು 24 ಗಂಟೆಯೊಳಗೆ ತೆರವುಗೊಳಿಸಿ ವರದಿ ಸಲ್ಲಿಸುವಂತೆ ಚುಣಾವಣಾ ಆಯೋಗವು ರಾಜ್ಯ ಸರ್ಕಾರಗಳಿಗೆ ಚಾಟಿ ಬೀಸಿದೆ.
ನವದೆಹಲಿ: ಸರ್ಕಾರ, ಸಾರ್ವಜನಿಕ ಹಾಗೂ ಖಾಸಗಿ ಸ್ವತ್ತುಗಳಲ್ಲಿ ಅನಧಿಕೃತವಾಗಿ ಅಳವಡಿಸಲಾದ ರಾಜಕೀಯ ಜಾಹೀರಾತುಗಳನ್ನು 24 ಗಂಟೆಯೊಳಗೆ ತೆರವುಗೊಳಿಸಿ ವರದಿ ಸಲ್ಲಿಸುವಂತೆ ಚುಣಾವಣಾ ಆಯೋಗವು ರಾಜ್ಯ ಸರ್ಕಾರಗಳಿಗೆ ಚಾಟಿ ಬೀಸಿದೆ.
ಲೋಕಸಭಾ ಚುನಾವಣೆ ಘೋಷಣೆಯಾದ ಮಾರ್ಚ್ 16ರಿಂದಲೇ ಜಾರಿಗೆ ಬಂದ ಮಾದರಿ ನೀತಿ ಸಂಹಿತೆ ಅನ್ವಯ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಕೇಂದ್ರ ಸಂಪುಟ ಕಾರ್ಯದರ್ಶಿ, ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಚುನಾವಣಾ ಆಯೋಗ ಪತ್ರ ಬರೆದಿತ್ತು.
'ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಅನಧಿಕೃತ ರಾಜಕೀಯ ಜಾಹೀರಾತುಗಳಲ್ಲಿ ಗೋಡೆ ಬರಹ, ಪೋಸ್ಟರ್‌ಗಳು, ವಿರೂಪಗೊಳಿಸಿದ ಯಾವುದೇ ಪೋಸ್ಟರ್‌ಗಳು, ಕಟೌಟ್, ಹೋರ್ಡಿಂಗ್ಸ್, ಬ್ಯಾನರ್ ಫ್ಲಾಗ್‌ಗಳನ್ನು ಕೂಡಲೇ ತೆರವುಗೊಳಿಸಬೇಕು. ವಿಮಾನ, ರೈಲ್ವೇ ಹಾಗೂ ಬಸ್ ನಿಲ್ದಾಣಗಳು, ರೈಲ್ವೇ ಸೇತುವೆಗಳು, ಹೆದ್ದಾರಿಗಳು, ಸರ್ಕಾರಿ ಬಸ್ಸುಗಳು, ವಿದ್ಯುತ್ ಹಾಗೂ ದೂರವಾಣಿ ಕಂಬಗಳು, ಸ್ಥಳೀಯ ಸಂಸ್ಥೆಗಳ ಕಟ್ಟಡಗಳ ಮೇಲೆ ಹಾಕಲಾಗಿದ್ದ ಇಂಥ ಜಾಹೀರಾತುಗಳನ್ನು ತೆರವುಗೊಳಿಸಿ' ಎಂದು ಖಡಕ್ ಸೂಚನೆ ನೀಡಿದೆ.
ನೀಡಿದ ಸೂಚನೆಯಂತೆ ಪಾಲಿಸದ ರಾಜ್ಯಗಳ ನಿಷ್ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು, 'ಕೂಡಲೇ ಇವುಗಳನ್ನು ತೆರವುಗೊಳಿಸಿ, 24 ಗಂಟೆಯೊಳಗೆ ವರದಿ ಸಲ್ಲಿಸುವಂತೆ' ಸೂಚನೆ ನೀಡಿದೆ.
ಜಾಹೀರಾತುಗಳನ್ನು ತೆರವುಗೊಳಿಸಿದ ವರದಿಯು ಗುರುವಾರ ಸಂಜೆ 5ರೊಳಗೆ ಆಯೋಗದ ಕಚೇರಿ ತಲುಪಬೇಕಿದೆ.