ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮಹಾಶಿವರಾತ್ರಿ ಉತ್ಸವವು ಶುಕ್ರವಾರ ಬೆಳಗ್ಗೆ ಉಷಃಪೂಜೆ, ಗಣಪತಿಹೋಮ, ಶತರುದ್ರಾಭಿಷೇಕದೊಂದಿಗೆ ಪ್ರಾರಂಭವಾಯಿತು. ಶ್ರೀ ಉದನೇಶ್ವರ ಭಜನಾ ಸಂಘ ಪೆರಡಾಲ ಇವರ ನೇತೃತ್ವದಲ್ಲಿ ಏಕಾಹ ಭಜನೆ ನಡೆಯಿತು. ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಸಂಜೆ ದೀಪಾರಾಧನೆ, ತಾಯಂಬಕ, ರಾತ್ರಿ ಶ್ರೀದೇವರ ಬಲಿ ಉತ್ಸವ ನವಕಾಭಿಷೇಕ, ವಸಂತಪೂಜೆ, ಶ್ರೀಭೂತಬಲಿ ನಡೆಯಿತು. ಮಾರ್ಚ್ 9ರಂದು ಶ್ರೀದೇವರ ಬಲಿ ಉತ್ಸವ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ 12.30ಕ್ಕೆ ಶ್ರೀ ಪಿಲಿಚಾಮುಂಡಿ ದೈವದ ಕೋಲ, ಅರಸಿನ ಹುಡಿ ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.