ತಿರುವನಂತಪುರಂ: ರಾಜ್ಯದಲ್ಲಿ ವಿದ್ಯುತ್ ಬಳಕೆ ಸಾರ್ವಕಾಲಿಕ ದಾಖಲೆ ತಲುಪಿದೆ. ಗುರುವಾರ, ಗರಿಷ್ಠ ಸಮಯದ ಬಳಕೆ 5150 ಮೆಗಾವ್ಯಾಟ್‍ಗೆ ತಲುಪಿತ್ತು.
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಕೆಎಸ್‍ಇಬಿ ತೊಳಲುತ್ತಿದ್ದು, ಕೊರತೆಯಾದರೆ ವಿದ್ಯುತ್ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಕೆಎಸ್ ಇಬಿ ತಿಳಿಸಿದೆ. ಗುರುವಾರ ಅತ್ಯಧಿಕ ಗರಿಷ್ಠ ಸಮಯದ ಬಳಕೆಯನ್ನು ಕಂಡಿದೆ.
ಜಾಗತಿಕ ತಾಪಮಾನ ಏರಿಕೆ ಮಧ್ಯೆ ‘ಅರ್ಥ್ ಅವರ್’ ಆಚರಿಸಲು ಸಚಿವರು ಕರೆ ನೀಡಿದ್ದಾರೆ. ಇಂದು ರಾತ್ರಿ 8:30 ರಿಂದ 9:30 ರವರೆಗೆ ಅರ್ಥ್ ಅವರ್ ಆಚರಿಸಲು ವಿದ್ಯುತ್ ಸಚಿವ ಕೃಷ್ಣನ್ ಕುಟ್ಟಿ ಕರೆ ನೀಡಿದ್ದಾರೆ. ಎಲ್ಲಾ ಅನಿವಾರ್ಯವಲ್ಲದ ವಿದ್ಯುತ್ ದೀಪಗಳು ಮತ್ತು ಉಪಕರಣಗಳನ್ನು ಒಂದು ಗಂಟೆ ಆಫ್ ಮಾಡಿ ಮತ್ತು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದ ಭೂಮಿಯನ್ನು ಉಳಿಸುವ ಜಾಗತಿಕ ಉಪಕ್ರಮದಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿರುವರು.
ಏತನ್ಮಧ್ಯೆ, ಕೆ.ಎಸ್.ಇ.ಬಿ ಪೀಕ್ ಸಮಯದಲ್ಲಿ ಹೆಚ್ಚಿನ ಬೆಲೆಗೆ ವಿದ್ಯುತ್ ಖರೀದಿಸುತ್ತಿದೆ. ಹೀಗಾಗಿ ಇದೇ ರೀತಿ ಮುಂದುವರಿದರೆ ಕೆಎಸ್ ಇಬಿ ತೀವ್ರ ಬಿಕ್ಕಟ್ಟು ಎದುರಿಸಬೇಕಾಗುತ್ತದೆ. ಪೀಕ್ ಅವರ್ಸ್ ನಲ್ಲಿ ವಿದ್ಯುತ್ ನಿಯಂತ್ರಣ ಹೇರಬೇಕಾಗುತ್ತದೆ ಎಂದು ಕೆಎಸ್ ಇಬಿ ಸ್ಪಷ್ಟಪಡಿಸಿದೆ. ಇನ್ನೂ ಎರಡು ತಿಂಗಳ ಕಾಲ ಬೇಸಿಗೆ ಮುಂದುವರಿಯಲಿದೆ. ಕೆಎಸ್‍ಇಬಿ ಮಾರ್ಚ್ ಅಂತ್ಯದಲ್ಲಿ ಹೆಚ್ಚಿನ ಬಳಕೆ ನಿರೀಕ್ಷಿಸಿರಲಿಲ್ಲ.
ಕಳೆದ ವಾರ ಮುಖ್ಯಮಂತ್ರಿ ನೇತೃತ್ವದಲ್ಲಿ ವಿದ್ಯುತ್ ಸಮಸ್ಯೆ ಕುರಿತು ಚರ್ಚಿಸಲು ಸಭೆ ನಡೆಸಲಾಗಿತ್ತು. ಸರ್ಕಾರದ ವಿವಿಧ ಇಲಾಖೆಗಳಿಂದ ಕೆಎಸ್‍ಇಬಿಗೆ ಪಾವತಿಸಬೇಕಾದ ಬಾಕಿಯನ್ನು ಪಾವತಿಸಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿಗೆ ಸಭೆಯು ವಹಿಸಿತ್ತು. ಬಾಕಿ ಪಾವತಿಯಾಗದಿದ್ದರೆ ಕೆಎಸ್‍ಇಬಿ ಮತ್ತಷ್ಟು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ.