HEALTH TIPS

ಲೋಕಸಭೆ ಚುನಾವಣೆ: ರಾಜಕೀಯ 'ದಾಳ'ವಾದ ರಾಜಭವನ?

             ವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಹಿಂದಿ ಸೀಮೆಯ ರಾಜ್ಯಗಳಲ್ಲಿ ಘನ ವಿಜಯ ಸಾಧಿಸಿದ್ದ ಕೇಸರಿ ಪಾಳಯವು ಕೇರಳ ಹಾಗೂ ತಮಿಳುನಾಡಿನ 59 ಕ್ಷೇತ್ರಗಳಲ್ಲಿ ಖಾತೆ ತೆರೆದಿರಲೇ ಇಲ್ಲ. ಈ ರಾಜ್ಯಗಳಲ್ಲಿ ಸಂಘಟನೆ ಬಲಗೊಳಿಸಲು ಬಿಜೆಪಿ ವರಿಷ್ಠರು ಶತಪ್ರಯತ್ನ ಮಾಡಿದರೂ ನಿರೀಕ್ಷಿತ ಫಲ ಸಿಕ್ಕಿಲ್ಲ.

            ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳಲ್ಲಿ ಕಳೆದ ಐದು ವರ್ಷಗಳಲ್ಲಿ ವಿಪಕ್ಷಗಳಿಗಿಂತ ಹೆಚ್ಚು ಸುದ್ದಿಯಾದವರು ರಾಜ್ಯಪಾಲರು. ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಹಾಗೂ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಅಲ್ಲಿನ ರಾಜ್ಯ ಸರ್ಕಾರಗಳು ದೂಷಿಸಿವೆ. ರಾಜ್ಯಪಾಲರ ನಡೆ ವಿರುದ್ಧ ಕೇರಳ, ತಮಿಳುನಾಡು, ತೆಲಂಗಾಣ, ಪಂಜಾಬ್‌ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ಹಲವು ಸಲ ಸುಪ್ರೀಂ ಕೋರ್ಟ್‌ ಕದ ತಟ್ಟಿವೆ.

             ರಾಜ್ಯ ಸರ್ಕಾರಗಳಿಗೆ ನಿರಂತರ ಕಿರುಕುಳ ನೀಡುವ ಮೂಲಕ ರಾಜ್ಯಪಾಲರು ಬಿಜೆಪಿಯ ನೆಲೆ ವಿಸ್ತರಿಸಲು ಅನುಕೂಲ ಮಾಡಿಕೊಡುತ್ತಾರೆ ಎಂದು ವಿಪಕ್ಷಗಳು ಆರೋಪಿಸಿದ್ದು ಉಂಟು. ಪಕ್ಷ ರಾಜಕಾರಣ ಮಾಡುತ್ತಿರುವ ರಾಜ್ಯಪಾಲರನ್ನು ಲೋಕಸಭಾ ಚುನಾವಣೆ ಮುಗಿಯವರೆಗೆ ಬದಲಿಸಬೇಡಿ ಎಂದು ಡಿಎಂಕೆ ನಾಯಕರು ವ್ಯಂಗ್ಯವಾಡಿದ್ದೂ ಇದೆ. ಬಿಜೆಪಿ ಪ್ರಬಲ ನೆಲೆ ಹೊಂದಿರದ ತೆಲಂಗಾಣ, ಪಂಜಾಬ್‌ನಲ್ಲಿ ಸಹ ರಾಜ್ಯಪಾಲರ ವರ್ತನೆ ಇದಕ್ಕಿಂತ ಭಿನ್ನವಲ್ಲ. 

              ರಾಜ್ಯಪಾಲರ ಅಸಹನೆ, ಅಸಹಕಾರ, ಪಕ್ಷಪಾತಿ ಧೋರಣೆ ವಿಷಯವು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಇನ್ನಷ್ಟು ಚರ್ಚೆಗೆ ಗ್ರಾಸವಾಗಲಿದೆ. ದಕ್ಷಿಣದ ಪಕ್ಷ ಏರು ಹಾದಿಯಲ್ಲಿ ಸಾಗಲು ರಾಜ್ಯ‍ಪಾಲರು ಸಣ್ಣದೊಂದು ಬುನಾದಿ ಹಾಕಿದ್ದಾರೆ ಎಂಬುದು ಕೇಸರಿ ಪಾಳಯದ ನಂಬಿಕೆ. ಅವರ ಕಠಿಣ ನಿಲುವಿನಿಂದ ಪಕ್ಷಕ್ಕೆ ಒಂದಿಷ್ಟು ಅನುಕೂಲವಾಗಲಿದೆ ಎಂಬ ಮಾತನ್ನು ಬಿಜೆಪಿ ನಾಯಕರೇ ಒಪ್ಪುತ್ತಾರೆ. ಮತ ಪ್ರಮಾಣ ಹಿಗ್ಗಿಸಲು ಬಿಜೆಪಿ ನಡೆಸಿದ ತಂತ್ರ ಎಂದು ವಿಶ್ಲೇಷಿಸಲಾಗಿದೆ.   ‌

ಆಗ ರಾಜ್ಯಪಾಲೆ- ಈಗ ಬಿಜೆಪಿ ಅಭ್ಯರ್ಥಿ

  •               ಮಹಿಳೆ ಎಂಬ ಕಾರಣಕ್ಕೆ ತಮ್ಮನ್ನು ಸರ್ಕಾರವು ಕೆಟ್ಟದಾಗಿ ನಡೆಸಿಕೊಂಡಿದೆ, ರಾಜ್ಯಪಾಲ ಹುದ್ದೆಗೂ ಗೌರವ ಕೊಡುತ್ತಿಲ್ಲ ಎಂದು ತೆಲಂಗಾಣದ ರಾಜ್ಯಪಾಲರಾದ ತಮಿಳ್‌ಇಸೈ ಸೌಂದರರಾಜನ್‌ ಆರೋಪಿಸಿದ್ದರು. 

  •            ಸರ್ಕಾರಿ ಆಸ್ಪತ್ರೆಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ, ಸರ್ಕಾರಿ ಆಸ್ಪತ್ರೆಯ ನಿರ್ದೇಶಕರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂದೂ ಆಪಾದಿಸಿದ್ದರು.

  •              ತಮಿಳ್‌ಇಸೈ ಅವರು 2019ರ ಚುನಾವಣೆಯಲ್ಲಿ ತೂತ್ತುಕುಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಳಿಕ ತೆಲಂಗಾಣ ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. ವಾರದ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ಅವರು ಚೆನ್ನೈ ದಕ್ಷಿಣದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 

ಎಎಪಿಯ ಅಬಕಾರಿ 'ನಶೆ' ಇಳಿಸಿದ ಎಲ್.ಜಿ

  •                      ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಸರ್ಕಾರವು 2014ರಲ್ಲಿ ಜನ ಲೋಕಪಾಲ ಮಸೂದೆಯನ್ನು ಅಂಗೀಕರಿಸಿ ಆಗಿನ ಎಲ್‌.ಜಿ ನಜೀಬ್ ಜಂಗ್‌ ಅವರಿಗೆ ಕಳುಹಿಸಿಕೊಟ್ಟಿತ್ತು. ಜಂಗ್‌ ಅವರು ಅದನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಕಳುಹಿಸಿಕೊಟ್ಟು ಕೈ ತೊಳೆದುಕೊಂಡಿದ್ದರು. 

  •              2016ರಿಂದ 2022ರವರೆಗೆ ಎಲ್‌.ಜಿಯಾಗಿದ್ದ ಅನಿಲ್‌ ಬೈಜಾಲ್‌ ಹಾಗೂ ಕೇಜ್ರಿವಾಲ್‌ ನಡುವೆ ತಿಕ್ಕಾಟ ನಡೆದಿತ್ತು. ಕೇಜ್ರಿವಾಲ್ ಮತ್ತು ಸಚಿವ ಸಂಪುಟದ ಸದಸ್ಯರು ಎಲ್‌.ಜಿ ಮನೆಯ ಹೊರಗೆ ಧರಣಿ ನಡೆಸಿದ್ದರು. ವಿಷಯ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ದೆಹಲಿ ಸರ್ಕಾರದ ನೆರವು ಮತ್ತು ಸಲಹೆಗೆ ಅನುಸಾರವಾಗಿ ಎಲ್‌.ಜಿ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. 

  • ಅಬಕಾರಿ ನೀತಿ ಜಾರಿಯ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಎಲ್‌.ಜಿ ವಿ.ಕೆ.ಸಕ್ಸೇನಾ ಅವರು ಸಿಬಿಐಗೆ ಪತ್ರ ಬರೆದಿದ್ದರು. ಪತ್ರದ ಆಧಾರದಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಅಬಕಾರಿ ಸಚಿವ ಮನೀಷ್ ಸಿಸೋಡಿಯಾ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಜೈಲುಪಾಲಾಗಿದ್ದಾರೆ. 

ಉಪರಾಷ್ಟ್ರಪತಿ ಹುದ್ದೆಗೇರುವ ತನಕ ಸಂಘರ್ಷ

  •                ಪ್ರಸ್ತುತ ಉಪರಾಷ್ಟ್ರಪತಿಯಾಗಿರುವ ಜಗದೀಪ್ ಧನಕರ್ ಅವರು ಈ ಹಿಂದೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಅಧಿಕಾರದಲ್ಲಿದ್ದ ಅಷ್ಟೂ ದಿನವೂ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆಗೆ ಸಂಘರ್ಷಕ್ಕೆ ಇಳಿದಿದ್ದರು. ಟ್ವೀಟ್ ಮಾಡಿ ಸಲಹೆ ನೀಡುತ್ತಿದ್ದ ಅವರು, ಸರ್ಕಾರದ ನಡೆಯನ್ನು ಪದೇ ಪದೇ ಪ್ರಶ್ನಿಸುತ್ತಿದ್ದರು. ಇದರಿಂದ ಕುಪಿತಗೊಂಡಿದ್ದ ಮಮತಾ ಅವರು ಜಗದೀಪ್ ಅವರ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿದ್ದರು.

  •                    ರಾಜಭವನವು ತಮ್ಮ ದೂರವಾಣಿಗಳನ್ನು ಕದ್ದಾಲಿಸುತ್ತಿದೆ ಎಂದು ಮಮತಾ ಆರೋಪಿಸಿದ್ದರು. 

ಸುಪ್ರೀಂ 'ಬೆಂಕಿ'ಗೆ ತಣ್ಣಗಾದ ಪುರೋಹಿತ್‌ 

                ಪಂಜಾಬ್‌ ವಿಧಾನಸಭೆ ಅಧಿವೇಶನದ ಸಿಂಧುತ್ವವನ್ನು ಪ್ರಶ್ನಿಸಿದ್ದ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, 'ಕಾನೂನಿನ ಉಲ್ಲಂಘನೆಯಾಗಿದೆ' ಎಂದು ತಕರಾರು ತೆಗೆದಿದ್ದರು. ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ಸಹಿ ಹಾಕುವುದಿಲ್ಲ ಎಂದು ಹೇಳಿದ್ದರು. ಇದನ್ನು ಪ್ರಶ್ನಿಸಿ ಪಂಜಾಬ್‌ ಎಎಪಿ ಸರ್ಕಾರವು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿತ್ತು. 'ವಿಧಾನಸಭೆ ಅಧಿವೇಶನದ ಸಿಂಧುತ್ವವನ್ನು ಅನುಮಾನಿಸುವ ಯಾವುದೇ ನಡೆಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರ ಅಪಾಯವನ್ನು ಉಂಟುಮಾಡಲಿದೆ. ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ' ಎಂದು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠವು ರಾಜ್ಯಪಾಲರಿಗೆ ಕಟುಮಾತುಗಳಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಮಸೂದೆಗಳಿಗೆ ಸಹಿ ಹಾಕಿದ್ದರು. 

'ದ್ರಾವಿಡ' ನೆಲದಲ್ಲಿ ರವಿ ರಗಳೆ 

  •                 ನೌಕರಿ ಕೊಡಿಸಲು ಹಣ ಪಡೆದ ಆರೋಪದಲ್ಲಿ ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು. ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸಿ ರಾಜ್ಯಪಾಲ ಆರ್.ಎನ್. ರವಿ ಆದೇಶ ಹೊರಡಿಸಿದ್ದರು. ನಂತರ ಇನ್ನೊಂದು ಆದೇಶ ಹೊರಡಿಸಿದ್ದ ರಾಜ್ಯಪಾಲರು, ಮೊದಲ ಆದೇಶವನ್ನು ಅಮಾನತಿನಲ್ಲಿ ಇರಿಸಿದ್ದರು. ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಮುಖ್ಯಮಂತ್ರಿಯ ಶಿಫಾರಸು ಇಲ್ಲದೆ ರಾಜ್ಯಪಾಲರು ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತಿಲ್ಲ ಎಂದು ಕೋರ್ಟ್‌ ತಾಕೀತು ಮಾಡಿತ್ತು. 

  •                  ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಶಿಕ್ಷೆಗೊಳಗಾದ ಬಳಿಕ ಕೆ.ಪೊನ್ಮುಡಿ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರು. ಪೊನ್ಮುಡಿ ಅವರನ್ನು ಸಚಿವರಾಗಿ ನೇಮಿಸಬೇಕು ಎಂದು ಸ್ಟಾಲಿನ್‌ ಅವರು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ಅದಕ್ಕೆ ರಾಜ್ಯಪಾಲರು ನಿರಾಕರಿಸಿದ್ದರು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ರಾಜ್ಯಪಾಲರ ನಡೆಗೆ ನ್ಯಾಯಪೀಠ ಗಂಭೀರ ಕಳವಳ ವ್ಯಕ್ತಪಡಿಸಿತ್ತು. ಅದಾದ ಬಳಿಕ ಸಂಪುಟಕ್ಕೆ ಸೇರ್ಪಡೆಗೆ ರವಿ ಅವರು ಒಪ್ಪಿಗೆ ನೀಡಿದ್ದರಯ. 

  •               ವಿಧಾನಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವಾಗ ಆರ್.ಎನ್. ರವಿ ಅವರು ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ಪೂರ್ತಿಯಾಗಿ ಓದಲು ನಿರಾಕರಿಸಿದ್ದರು. ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರ ಕೊಟ್ಟಿಲ್ಲ ಹಾಗೂ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಮಿಳುನಾಡಿನಲ್ಲಿ ಜಾರಿಗೆ ತರುವುದಿಲ್ಲ ಎಂಬ ಅಂಶಗಳು ಈ ಭಾಷಣದ ಪ್ರತಿಯಲ್ಲಿದ್ದವು.

ಸರ್ಕಾರ ರಚನೆಯಲ್ಲಿ ಕೋಶಿಯಾರಿ ಗಡಿಬಿಡಿ  

  •                 ಶಿವಸೇನಾ ನೇತೃತ್ವದ ಎಂವಿಎ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮಧ್ಯೆ ತಿಕ್ಕಾಟ ತೀವ್ರವಾಗಿತ್ತು. ಸಂಪುಟ ಸದಸ್ಯರ ಪ್ರಮಾಣವಚನ ಸ್ವೀಕಾರಕ್ಕೆ ಕೋಶಿಯಾರಿ ಅವಕಾಶವನ್ನೇ ನೀಡಿರಲಿಲ್ಲ. ಹಲವು ತಿಂಗಳ ನಂತರ ಸಚಿವರು ಅಧಿಕಾರ ಸ್ವೀಕರಿಸಬೇಕಾದ ಸನ್ನಿವೇಶ ಸೃಷ್ಟಿಸಿದ್ದರು. 

  •                ಕೋವಿಡ್‌ ಸಂದರ್ಭದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ  ಹಲವು ನಿರ್ಧಾರಗಳನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. 

  •                 ಉದ್ಧವ್ ನೇತೃತ್ವದ ಸರ್ಕಾರ ಪತನವಾಗಿ ಏಕನಾಥ ಶಿಂದೆ ನೇತೃತ್ವದ ಸರ್ಕಾರ ರಚನೆಯಾಗುವ ಪ್ರಕ್ರಿಯೆಯಲ್ಲಿ ಕೋಶಿಯಾರಿ ನಡೆದುಕೊಂಡ ರೀತಿಯು ಲೋಪದಿಂದ ಕೂಡಿತ್ತು ಎಂದು ಸುಪ್ರೀಂ ಕೋರ್ಟ್‌ ಕಟುವಾಗಿ ಹೇಳಿತ್ತು. 

ಕೇರಳ: ರಾಜಭವನದಿಂದ ಬೀದಿಯವರೆಗೆ 

  •               ಕೇರಳ ವಿಧಾನಸಭೆಯು ಅಂಗೀಕಾರ ನೀಡಿರುವ ಮಸೂದೆಗಳ ವಿಚಾರವಾಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಎರಡು ವರ್ಷಗಳಿಂದ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಸರ್ಕಾರದ ವಿಳಂಬ ನಡೆ ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಬಳಿಕ ಅವರು ಮಸೂದೆಗಳಿಗೆ ಅಂಗೀಕಾರ ನೀಡಿದ್ದರು. 

  •             ರಾಜ್ಯಪಾಲರ ಆಪ್ತ ಕಾರ್ಯದರ್ಶಿಯನ್ನಾಗಿ ಬಿಜೆಪಿ ಮುಖಂಡರೊಬ್ಬರನ್ನು ನೇಮಕ ಮಾಡಿಕೊಂಡಿದ್ದೂ ಆರಿಫ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನಡುವೆ ಸಂಘರ್ಷ ಸೃಷ್ಟಿಸಿತ್ತು.

  •                 ವಿಧಾನಸಭೆಯ ಬಜೆಟ್‌ ಅಧಿವೇಶನಕ್ಕೂ ಮುನ್ನ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರು ಆರಂಭಿಕ ಮತ್ತು ಕೊನೆಯ ಪ್ಯಾರಾ ಮಾತ್ರ ಓದಿದ್ದರು. ಕೇಂದ್ರದ ಬಗ್ಗೆ ಟೀಕೆ ಇರುವ ಪುಟಗಳನ್ನು ಓದುವ ಗೋಜಿಗೆ ಹೋಗಿರಲಿಲ್ಲ.  

  •                  ಕೊಲ್ಲಂ ಜಿಲ್ಲೆಯ ನಿಲಮೇಲ್‌ನಲ್ಲಿ ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ರಾಜ್ಯಪಾಲರು ಹರಿಹಾಯ್ದಿದ್ದರು. ರಸ್ತೆ ಬದಿಯಲ್ಲಿ ಕುಳಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ಕಿಡಿಕಾರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries