ಮಂಜೇಶ್ವರ: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ತೆಗೆದು, ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಯುವಕನನ್ನು ಕೊಲೆಗೈದಿರುವುದಾಗಿ ಉನ್ನತ ವೈದ್ಯಕೀಯ ತಪಾಸಣಾ ವರದಿ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಕುಂಜತ್ತೂರು ಕಣ್ವತೀರ್ಥ ನಿವಾಸಿ ಅಬ್ದುಲ್ ರಶೀದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇತರ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇತರ ಆರು ಮಂದಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮೀಯಪದವು ಮದಕ್ಕಳ ನಿವಾಸಿ ಮೊಯ್ದೀನ್ ಆರಿಫ್(22)ಎಂಬಾತ ಮೃತಪಟ್ಟಿದ್ದು, ಆರಿಫ್ ಸಾವಿಗೆ ಗಂಭೀರ ಹಲ್ಲೆ ಕಾರಣ ಎಂಬುದಾಗಿ ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿತ್ತು. ಬಂಧಿತ ಅಬ್ದುಲ್ ರಶೀದ್, ಕೊಲೆಗೀಡಗಿರುವ ಮೊಯ್ದೀನ್‍ಆರಿಫ್‍ನ ಸಹೋದರಿ ಪತಿಯಾಗಿದ್ದಾನೆ.
ಗಾಂಜಾ ಸೇವಿಸಿ ಗಲಭೆ ನಡೆಸಿದ ಹಿನ್ನೆಲೆಯಲ್ಲಿ ಈತನನ್ನು ಮಂಜೇಶ್ವರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದರು. ನಂತರ ಅಬ್ದುಲ್ ರಶೀದ್ ಠಾಣೆಯಿಂದ ಮೊಯ್ದೀನ್ ಆರಿಫ್‍ನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿ, ಬೈಕಿನಲ್ಲಿ ಕರೆದೊಯ್ದಿದ್ದನು. ಸೋಮವಾರ ಮೊಯ್ದೀನ್ ಆರಿಫ್ ತನ್ನ ಮನೆಯಲ್ಲಿ ರಕ್ತವಾಂತಿ ನಡೆಸಿದ ಹಿನ್ನೆಲೆಯಲ್ಲಿ ಈತನನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.