ಉಪ್ಪಳ: ಉಪ್ಪಳ ಪೇಟೆಯಲ್ಲಿ ಎಟಿಎಂ ಯಂತ್ರಕ್ಕೆ ತುಂಬಲು ತಂದ 50ಲಕ್ಷ ರೂ. ನಗದು ದೋಚಿದ ಪ್ರಕರಣದ ತನಿಖೆಯನ್ನು ಕರ್ನಾಟಕಕ್ಕೆ ವಿಸ್ತರಿಸಲಾಗಿದ್ದು, ಇದಕ್ಕಾಗಿ ಕರ್ನಾಟಕ ಪೊಲೀಸರ ನೆರವು ಯಾಚಿಸಿದ್ದಾರೆ. ಪ್ರಕರಣದಲ್ಲಿ ಮೇಲ್ನೋಟಕ್ಕೆ ಒಬ್ಬನೇ ಕೃತ್ಯವೆಸಗಿರುವುದಾಗಿ ಸಂಶಯಿಸಲಾಗಿದ್ದರು, ಒಂದಕ್ಕಿಂತ ಹೆಚ್ಚುಮಂದಿ ಶಾಮೀಲಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಎಗರಿಸಿದ ಹಣದ ಬ್ಯಾಗಿನೊಂದಿಗೆ ವ್ಯಕ್ತಿಯೊಬ್ಬ ಹೆಜ್ಜೆಹಾಕುತ್ತಿರುವುದು ಸಿಸಿ ಕ್ಯಾಮರಾ ದೃಶ್ಯಾವಳಿಯಿಂದ ಪತ್ತೆಯಾಗಿದ್ದು, ನಂತರ ಈತ ಅಲ್ಪ ದೂರ ನಿಲ್ಲಿಸಿದ್ದ ಕಾರಿನತ್ತ ತೆರಳಿರುವುದು ದೃಶ್ಯಗಳಿಂದ ವ್ಯಕ್ತವಾಗಿದೆ. ನಂತರ ಉಪ್ಪಳದಿಂದ ಒಳರಸ್ತೆಯಾಗಿ ಕರ್ನಾಟಕ ಭಾಗಕ್ಕೆ ತೆರಳಿರುವ ಸಾಧ್ಯತೆಯಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಇದೊಂದು ಪೂರ್ವಯೋಜಿತ ಕೃತ್ಯವಾಗಿರುವುದಾಗಿ ಸಂಶಯಿಸಲಾಗಿದೆ. ಕಾಸರಗೋಡಿನ ಮೂರು ಬ್ಯಾಂಕುಗಳಿಂದ ಸಂಗ್ರಹಿಸಿದ ಹಣವನ್ನು ಸೀತಾಂಗೋಳಿಯ ಎಟಿಎಂಗೆ ತುಂಬಿಸಿ, ಅಲ್ಲಿಂದ ಕುಂಬಳೆ ಹಾದಿಯಾಗಿ ಉಪ್ಪಳ ತಲುಪಿದೆ. ಸಿಬ್ಬಂದಿ ಉಪ್ಪಳದ ಎಟಿಎಂ ಯಂತ್ರದೊಳಗೆ ಹಣ ತುಂಬಿ ವಾಪಸಾಗುವ ಮಧ್ಯೆ ವಾಹನದ ಗಾಜು ಒಡೆದು 50ಲಕ್ಷ ರೂ. ಹೊಂದಿದ್ದ ಬ್ಯಾಗನ್ನು ಕಳ್ಳ ಎಗರಿಸಿದ್ದನು. ವಾಹನವನ್ನು ಕಾಸರಗೋಡಿನಿಂದಲೇ ಹಿಂಬಾಲಿಸಿಕೊಂಡು ಬಂದಿರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದೆ. ವಾಹನದಲ್ಲಿ ಸೆಕ್ಯೂರಿಟಿ ಸಿಬ್ಬಂದಿಯಿಲ್ಲದಿದ್ದುದು ಕಳ್ಳರಿಗೆ ವರದಾನವಾಗಿತ್ತು. ಬೆರಳಚ್ಚು ತಜ್ಞರು ವಾಹನದಿಂದ ಬೆರಳಚ್ಚು ಸಂಗ್ರಹಿಸಿದ್ದಾರೆ.
ಆರೋಪಿ ಪತ್ತೆಗಾಗಿ ಪೊಲೀಸರು ವ್ಯಾಪಕ ಹುಡುಕಾಟ ನಡೆಸಿದ್ದಾರೆ. ಉಪ್ಪಳ, ಮಂಜೇಶ್ವರ ಸೇರಿದಂತೆ ವಿವಿಧೆಡೆ ಇತರ ರಾಝ್ಯ ಕಾರ್ಮಿಕರನ್ನು ಕೇಂದ್ರೀಕರಿಸಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.