ತಿರುವನಂತಪುರಂ: ಕೇರಳದ ಹಣಕಾಸು ನಿರ್ವಹಣೆ ವಿಫಲವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇರಳ ಸಾಲದ ಮಿತಿಯನ್ನು ಮೀರಿ ಸಾಲ ಮಾಡುತ್ತಿದೆ ಎಂದು ತಿರುವನಂತಪುರಂ ಎನ್.ಡಿ.ಎ. ಚುನಾವಣಾ ಸಮಾವೇಶದಲ್ಲಿ ಅವರು ಹೇಳಿದರು. 2016ರಿಂದ ಕೇರಳದ ಹಣಕಾಸು ನಿರ್ವಹಣೆ ವಿಫಲವಾಗಿದೆ. ಸಾಲ ಮಾಡುವುದಕ್ಕೂ ಮಿತಿ ಇದೆ, ಆದರೆ ಕೇರಳದ ಸಾಲ ಮಿತಿ ಮೀರಿದೆ ಎಂದು ಆರೋಪಿಸಿದರು.
ಕೇರಳವು ಬಜೆಟ್‍ನ ಹೊರಗೆ ದೊಡ್ಡ ಮೊತ್ತದ ಹಣವನ್ನು ಎರವಲು ಪಡೆಯುತ್ತದೆ. ಆದರೆ ಖಜಾನೆಯ ಹಣವನ್ನು ಬಳಸಿ ಮರುಪಾವತಿ ಮಾಡಲಾಗುತ್ತದೆ. ಮರುಪಾವತಿಗೆ ಹಣವಿಲ್ಲ ಎಂದು ಹೇಳಲಾಗುತ್ತದೆ. ಕೇರಳಕ್ಕೆ ಬಂಡವಾಳ ಬರುತ್ತಿಲ್ಲ, ಕೇರಳದ ಪರಿಸ್ಥಿತಿ ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ. ಕಿಟೆಕ್ಸ್ ಕಂಪನಿ ತೆಲಂಗಾಣಕ್ಕೆ ಹೋಗುತ್ತಿರುವುದನ್ನು ಉಲ್ಲೇಖಿಸಿ ಸಚಿವರು ಭಾರೀ ಟೀಕೆ ವ್ಯಕ್ತಪಡಿಸಿದರು.
ಕೇರಳದಲ್ಲಿ ಆಡಳಿತ ನಡೆಸುವವರಿಗೆ ರಾಜ್ಯ ಉನ್ನತಿಗೊಳ್ಳಬೇಕೆಂಬ ಮನೋಭಾವವಿಲ್ಲ. ಸ್ವಂತ ಲಾಭವೇ ಅವರ ಗುರಿ ಎಂದು ನಿರ್ಮಲಾ ಆರೋಪಿಸಿದರು. ಚಿನ್ನದ ಕಳ್ಳಸಾಗಣೆ ಮತ್ತು ಲೈಫ್ ಮಿಷನ್ ಪ್ರಕರಣಗಳನ್ನು ಉಲ್ಲೇಖಿಸಿ ಕೇರಳದಲ್ಲಿ ಭ್ರಷ್ಟಾಚಾರದ ಸರಣಿ ನಡೆಯುತ್ತಿದೆ ಎಂದು ಟೀಕಿಸಿದರು. ಕೇರಳದಲ್ಲಿ ನಿರುದ್ಯೋಗ ದರವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು.