ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯ ಸೋಮವಾರ ವಾರೆಂಟ್ ಜಾರಿ ಮಾಡಿದೆ.
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ನಿಬಂಧನೆಗಳ ಅಡಿಯಲ್ಲಿ ಠಾಕೂರ್ ಮತ್ತು ಇತರ ಆರು ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಸದ್ಯ ಕೋಡ್ ಆಪ್ ಕ್ರಿಮಿನಲ್ ಪ್ರೊಸೀಜರ್ (ಸಿಆರ್‌ಪಿಸಿ) ಅಡಿಯಲ್ಲಿ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದೆ. ವಿಶೇಷ ನ್ಯಾಯಾಲಯವು ಈ ಹಿಂದೆ ಪ್ರಕರಣದ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ವಿಶೇಷ ನ್ಯಾಯಾಧೀಶ ಎಕೆ ಲಹೋಟಿ ಅವರು ಠಾಕೂರ್ ವಿರುದ್ಧ ವಾರಂಟ್ ಜಾರಿ ಮಾಡಿದ್ದಾರೆ ಮತ್ತು 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಮಾರ್ಚ್ 20 ರೊಳಗೆ ವರದಿಯನ್ನು ಸಲ್ಲಿಸುವಂತೆ ತನಿಖಾ ಸಂಸ್ಥೆಗೆ ಸೂಚಿಸಿದ್ದಾರೆ. ಕಳೆದ ತಿಂಗಳು, ಠಾಕೂರ್ ಅವರು ವಿಚಾರಣೆಗೆ ಹಾಜರಾಗಲು ವಿಫಲವಾದರೆ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
2008ರ ಸೆಪ್ಟೆಂಬರ್ 29 ರಂದು ಉತ್ತರ ಮಹಾರಾಷ್ಟ್ರದ ಮಾಲೆಗಾಂವ್ ಎಂಬ ಪಟ್ಟಣದ ಮಸೀದಿಯ ಬಳಿ ಮೋಟಾರ್ ಸೈಕಲ್‌ನಲ್ಲಿ ಇರಿಸಿದ್ದ ಸ್ಫೋಟಕ ಸಾಧನವು ಸ್ಫೋಟಗೊಂಡು ಆರು ಜನರು ಸಾವಿಗೀಡಾಗಿದ್ದರು. ಘಟನೆಯಲ್ಲಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
2011ರಲ್ಲಿ ಎನ್‌ಐಎಗೆ ವರ್ಗಾಯಿಸುವ ಮೊದಲು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ಆರಂಭದಲ್ಲಿ ಪ್ರಕರಣವನ್ನು ತನಿಖೆ ನಡೆಸಿತು.