ನವದೆಹಲಿ: ಸಂವಿಧಾನವನ್ನು ಗೌಣವಾಗಿಸಲು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವುದಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಸಿಬಿಐನಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಟೀಕಿಸಿದ್ದಾರೆ.
'ಪ್ರಧಾನ ವಿರೋಧ ಪಕ್ಷಕ್ಕೆ ಕಿರುಕುಳ ನೀಡುವುದಕ್ಕಾಗಿ ಆದಾಯ ತೆರಿಗೆ (ಐ.ಟಿ.) ಇಲಾಖೆಯನ್ನು ಒಂದು ಅಸ್ತ್ರವನ್ನಾಗಿ ಏಕೆ ಬಳಸಿಕೊಳ್ಳಲಾಗುತ್ತಿದೆ' ಎಂದು ಪ್ರಶ್ನಿಸಿದ್ದಾರೆ.
'ಕೇಂದ್ರ ಸರ್ಕಾರದ ಇಂತಹ ಕ್ರಮಗಳು ಬರುವ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಕಾಂಗ್ರೆಸ್‌ಗೆ ತಡೆ ಒಡ್ಡಲಾರವು' ಎಂದಿರುವ ಅವರು, 'ಈ ಎಲ್ಲ ಕೇಂದ್ರೀಯ ಸಂಸ್ಥೆಗಳನ್ನು ಬಿಜೆಪಿಯ ಸರ್ವಾಧಿಕಾರ ಎಂಬ ಕಪಿಮುಷ್ಟಿಯಿಂದ ಪಕ್ಷವು ಬಿಡುಗಡೆ ಮಾಡಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಬಿಜೆಪಿಯು ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, 'ಸರ್ಕಾರ ಬದಲಾದ ನಂತರ, ಪ್ರಜಾತಂತ್ರ ವ್ಯವಸ್ಥೆಯನ್ನು ಹಾಳು ಮಾಡಿದವರ ವಿರುದ್ಧ ನಿಶ್ಚಿತವಾಗಿಯೂ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಗುಡುಗಿದ್ದಾರೆ.
'ಬಿಜೆಪಿಟ್ಯಾಕ್ಸ್‌ಟೆರರಿಸಂ' ಎಂಬ ಹ್ಯಾಷ್‌ಟ್ಯಾಗ್ ಬಳಸಿ, ತಮ್ಮ ಹಳೆಯ ವಿಡಿಯೊವನ್ನು ರಾಹುಲ್ ಹಂಚಿಕೊಂಡಿದ್ದಾರೆ.