ನವದೆಹಲಿ: ಚುನಾವಣಾ ಆಯುಕ್ತರಾಗಿದ್ದ ಅರುಣ್ ಗೋಯಲ್ ಅವರ ದಿಢೀರ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, 'ವೈಯಕ್ತಿಕ ವಿಚಾರಗಳನ್ನು ಗೌರವಿಸೋಣ' ಎಂದು ಹೇಳಿದರು.
ನವದೆಹಲಿ: ಚುನಾವಣಾ ಆಯುಕ್ತರಾಗಿದ್ದ ಅರುಣ್ ಗೋಯಲ್ ಅವರ ದಿಢೀರ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, 'ವೈಯಕ್ತಿಕ ವಿಚಾರಗಳನ್ನು ಗೌರವಿಸೋಣ' ಎಂದು ಹೇಳಿದರು.
ಲೋಕಸಭಾ ಚುನಾವಣೆಯ ವೇಳಾಪಟ್ಟಿ ಘೋಷಣೆ ಹಿನ್ನೆಲೆ ಪತ್ರಿಕಾಗೋಷ್ಠಿ ನಡೆಸಿದ ರಾಜೀವ್ ಅವರು, 'ಚುನಾವಣಾ ಸಮಿತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ಪ್ರೋತ್ಸಾಹಿಸಲಾಗುತ್ತದೆ' ಎಂದರು.
'ಅರುಣ್ ನಮ್ಮ ತಂಡದಲ್ಲಿದ್ದ ಉತ್ತಮ ವ್ಯಕ್ತಿ. ಅವರೊಂದಿಗೆ ಕೆಲಸ ಮಾಡುವುದು ತುಂಬಾ ಖುಷಿಯ ವಿಷಯವಾಗಿತ್ತು. ಆದರೆ, ಎಲ್ಲ ಸಂಸ್ಥೆಗಳಲ್ಲಿ ವೈಯಕ್ತಿಕ ವಿಚಾರಗಳಿಗೆ ಗೌರವ ನೀಡಬೇಕಾಗುತ್ತದೆ. ಯಾರ ಬಗ್ಗೆಯೂ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವಷ್ಟು ನಾವು ಸಂವೇದನಾರಹಿತರಾಗಿರಬಾರದು' ಎಂದರು.
ಮುಖ್ಯ ಆಯುಕ್ತರೊಂದಿಗಿನ ಭಿನ್ನಾಭಿಪ್ರಾಯದಿಂದ ಗೋಯಲ್ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಗಳ ಬಗ್ಗೆ ನೇರವಾಗಿ ಉತ್ತರಿಸದ ರಾಜೀವ್ ಅವರು, 'ಸಮಿತಿಯಲ್ಲಿನ ಭಿನ್ನಾಭಿಪ್ರಾಯಗಳನ್ನು ಪ್ರೋತ್ಸಾಹಿಸುವ ಪದ್ಧತಿ ನಮ್ಮಲ್ಲಿದೆ. ಯಾಕೆಂದರೆ ನಾವು ಮಾಡುತ್ತಿರುವುದು ಸಂಕೀರ್ಣವಾದ ಕೆಲಸ. ಒಂದು ಯೋಚನೆಗಿಂತ ಮೂರು ಯೋಚನೆಗಳು ಉತ್ತಮವಾಗಿರುತ್ತದೆ. ನಮಗೆ ಸವಾಲೆಸೆಯುವವರು ನಮ್ಮ ಬಳಿಯೇ ಇರಬೇಕು' ಎಂದರು.
ಚುನಾವಣಾ ಆಯುಕ್ತರಾಗಿ ಡಿಸೆಂಬರ್ 2027ರವರೆಗೆ ಅಧಿಕಾರವಧಿ ಹೊಂದಿದ್ದ ಗೋಯಲ್ ಅವರು ಮಾರ್ಚ್ 9ರಂದು ರಾಜೀನಾಮೆ ನೀಡಿದ್ದರು.