ನವದೆಹಲಿ: ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿ ಪೂರ್ಣ ಮಾಹಿತಿ ಬಹಿರಂಗಪಡಿಸದ್ದಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಅನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ತೀವ್ರ ತರಾಟೆಗೆ ತೆಗೆದುಕೊಂಡಿದೆ.
'ಅಲ್ಪ ಸ್ವಲ್ಪ ಮಾಹಿತಿ ನೀಡುವುದನ್ನು ನಿಲ್ಲಿಸಿ. ಮಾರ್ಚ್ 21ರ ಒಳಗಾಗಿ ಸಂಪೂರ್ಣ ಮಾಹಿತಿ ಬಹಿರಂಗಪಡಿಸಿ' ಎಂದು ಸೋಮವಾರ ತಾಕೀತು ಮಾಡಿತು.
ಬಾಂಡ್‌ಗಳಿಗೆ ಇರುವ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಬಹಿರಂಗಪಡಿಸುವಂತೆಯೂ ನಿರ್ದೇಶನ ನೀಡಿದೆ. ಈ ಸಂಖ್ಯೆಯನ್ನು ಬಹಿರಂಗಪಡಿಸಿದರೆ ಬಾಂಡ್‌ಗಳ ಖರೀದಿದಾರರು ಯಾವ ರಾಜಕೀಯ ಪಕ್ಷಗಳಿಗೆ ಎಷ್ಟು ದೇಣಿಗೆ ನೀಡಿದ್ದಾರೆ ಎಂಬುದು ಬಯಲಾಗುತ್ತದೆ.
'ಎಸ್‌ಬಿಐ ತನ್ನ ಬಳಿಯಿರುವ ಎಲ್ಲ ಮಾಹಿತಿ ಬಹಿರಂಗಪಡಿಸಬೇಕು ಎಂಬುದರಲ್ಲಿ ಯಾವ ಅನುಮಾನವೂ ಬೇಡ' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಪೀಠ ಹೇಳಿತು.
ಎಸ್‌ಬಿಐ ನೀಡುವ ಮಾಹಿತಿಯನ್ನು ಚುನಾವಣಾ ಆಯೋಗವು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಪೀಠ ಸೂಚಿಸಿತು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಪೀಠದ ಇತರ ಸದಸ್ಯರಾಗಿದ್ದಾರೆ.
'ಆದೇಶವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಮತ್ತು ಭವಿಷ್ಯದಲ್ಲಿ ಯಾವುದೇ ವಿವಾದ ಉಂಟಾಗುವುದನ್ನು ತಪ್ಪಿಸಲು, ಚುನಾವಣಾ ಬಾಂಡ್‌ಗಳ ಎಲ್ಲ ವಿವರಗಳನ್ನು ಬಹಿರಂಗಪಡಿಸಿರುವು
ದನ್ನು ಸೂಚಿಸುವ ಪ್ರಮಾಣ ಪತ್ರವನ್ನು ಎಸ್‌ಬಿಐನ ವ್ಯವಸ್ಥಾಪಕ ನಿರ್ದೇಶಕರು ಗುರುವಾರ (ಮಾರ್ಚ್ 21) ಸಂಜೆಯೊಳಗೆ ಸಲ್ಲಿಸಬೇಕು' ಎಂದು ಪೀಠ ನಿರ್ದೇಶಿಸಿತು.
'ನಾವು ಎಲ್ಲ ಮಾಹಿತಿಯನ್ನೂ ನೀಡುತ್ತೇವೆ. ಯಾವುದನ್ನೂ ಮುಚ್ಚಿಡುವುದಿಲ್ಲ' ಎಂದು ಬ್ಯಾಂಕ್ ಪರ ಹಾಜರಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಪೀಠಕ್ಕೆ ತಿಳಿಸಿದರು.
ಎನ್‌ಜಿಒ ಅರ್ಜಿ ತಿರಸ್ಕಾರ: ಬಾಂಡ್ ಯೋಜನೆ ಜಾರಿಯಾದಾಗಿನಿಂದ (2018) ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದವರೆಗಿನ (2019ರ ಏಪ್ರಿಲ್ 12) ಅವಧಿಯಲ್ಲಿ ಖರೀದಿಯಾದ ಬಾಂಡ್‌ಗಳ ವಿವರ
ಗಳನ್ನು ಬಹಿರಂಗ ಪಡಿಸುವಂತೆ ಕೋರಿ ಸಿಟಿಜನ್ಸ್ ರೈಟ್ಸ್ ಟ್ರಸ್ಟ್ ಎಂಬ ಹೆಸರಿನ ಎನ್‌ಜಿಒ ಸಲ್ಲಿಸಿದ್ದ ಅರ್ಜಿಯನ್ನು ಪೀಠವು ತಿರಸ್ಕರಿಸಿತು.
ಪೀಠ ಹೇಳಿದ್ದು....
ವಿಶಿಷ್ಟ ಗುರುತಿನ ಸಂಖ್ಯೆ ಸೇರಿದಂತೆ ಬಾಂಡ್‌ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಬಹಿರಂಗಪಡಿಸುವಂತೆ ನಿರ್ದೇಶಿಸಿದ್ದೆವು. ಅಲ್ಪ ಸ್ವಲ್ಪ ಮಾಹಿತಿ ನೀಡಬಾರದು
ಈ ಹಿಂದೆ ನೀಡಿದ ತೀರ್ಪನ್ನು ಎಸ್‌ಬಿಐ ಪಾಲಿಸಬೇಕು. ಈ ವಿಚಾರದಲ್ಲಿ ಇನ್ನೊಂದು ಆದೇಶಕ್ಕೆ ಕಾಯಬಾರದು
'ಏನು ಬಹಿರಂಗಪಡಿಸಬೇಕೆಂದು ನೀವೇ ಹೇಳಿ, ನಾವು ಬಹಿರಂಗಪಡಿಸುತ್ತೇವೆ' ಎಂಬ ಧೋರಣೆಯನ್ನು ಎಸ್‌ಬಿಐ ತೋರುತ್ತಿದೆ. ಇದು ಸರಿಯಲ್ಲ
ಮೂರನೇ ಬಾರಿ ಹಿನ್ನಡೆ
ಚುನಾವಣಾ ಬಾಂಡ್ ವಿಚಾರದಲ್ಲಿ ಎಸ್‌ಬಿಐಗೆ ಸುಪ್ರೀಂ ಕೋರ್ಟ್‌ನಲ್ಲಿ ಎಂಟು ದಿನಗಳ ಅಂತರದಲ್ಲಿ ಮೂರನೇ ಬಾರಿ ಹಿನ್ನಡೆ ಆಗಿದೆ.
ಬಾಂಡ್ ಕುರಿತ ವಿವರಗಳನ್ನು ಸಲ್ಲಿಸಲು ನೀಡಿದ್ದ ಗಡುವು ವಿಸ್ತರಿಸುವಂತೆ ಕೋರಿ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 11ರಂದು ತಳ್ಳಿಹಾಕಿತ್ತು.
ಬಾಂಡ್‌ಗಳಿಗೆ ಸಂಬಂಧಿಸಿದಂತೆ ಅಪೂರ್ಣ ಮಾಹಿತಿ ನೀಡಿದ್ದಕ್ಕಾಗಿ ಮಾರ್ಚ್ 15ರಂದು ಎಸ್‌ಬಿಐಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ತುರ್ತು ವಿಚಾರಣೆಗೆ ಒಪ್ಪದ ಪೀಠ
ಚುನಾವಣಾ ಬಾಂಡ್ ಮಾಹಿತಿ ಬಹಿರಂಗಪಡಿಸದಂತೆ ಕೋರಿ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಅಸೋಚಾಮ್) ಹಾಗೂ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಪೀಠವು ಒಪ್ಪಲಿಲ್ಲ.
'ಪ್ರಚಾರ ಗಿಟ್ಟಿಸಲು ಕಸರತ್ತು ಬೇಡ'
ಚುನಾವಣಾ ಬಾಂಡ್ ಮಾಹಿತಿ ಬಹಿರಂಗಪಡಿಸುವಂತೆ ನೀಡಿದ್ದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ಅಧ್ಯಕ್ಷ ಆದಿಶ್ ಸಿ. ಅಗರವಾಲ್ ಬರೆದಿದ್ದ ಪತ್ರವನ್ನು ಪೀಠವು ಇದೇ ವೇಳೆ ತಳ್ಳಿಹಾಕಿತು.
'ನೀವು ಹಿರಿಯ ವಕೀಲರು ಮಾತ್ರವಲ್ಲದೆ, ಎಸ್‌ಸಿಬಿಎ ಅಧ್ಯಕ್ಷರೂ ಆಗಿದ್ದೀರಿ. ಕಾನೂನು ಪ್ರಕ್ರಿಯೆ ಏನೆಂಬುದು ನಿಮಗೆ ತಿಳಿದಿದೆ' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಆದಿಶ್ ಅವರನ್ನು ಉದ್ದೇಶಿಸಿ ಹೇಳಿದರು.
'ತೀರ್ಪನ್ನು ಸ್ವಯಂಪ್ರೇರಿತರಾಗಿ ಮರು ಪರಿಶೀಲಿಸುವಂತೆ ಕೋರಿ ಪತ್ರ ಬರೆದಿದ್ದೀರಿ. ಇವೆಲ್ಲವೂ, ಪ್ರಚಾರ ಗಿಟ್ಟಿಸಲು ನಡೆಸುವ ಕಸರತ್ತು. ಅದಕ್ಕೆ ನಾವು ಅವಕಾಶ ನೀಡೆವು. ನನಗೆ ಹೆಚ್ಚಿನದ್ದು ಹೇಳುವಂತೆ ಮಾಡಬೇಡಿ. ಇನ್ನೇನಾದರೂ ಹೇಳಿದರೆ ಅದು ನಿಮಗೆ ಇಷ್ಟವಾಗದು' ಎಂದು
ತರಾಟೆಗೆ ತೆಗೆದುಕೊಂಡರು.