ಮುಂಬೈ: 'ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತಮ್ಮ ಪಕ್ಷ ಪ್ರಮುಖ ಪಾತ್ರ ವಹಿಸಿದ್ದರೂ ಇದರ ಶ್ರೇಯವನ್ನು ಆಡಳಿತಾರೂಢ ಬಿಜೆಪಿ ಪಡೆಯಲು ಪ್ರಯತ್ನಿಸುತ್ತಿದೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಮುಂಬೈ ಕಾಂಗ್ರೆಸ್ ಕಾರ್ಯಕರ್ತರ ಒಂದು ದಿನದ ಸಮಾವೇಶವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
'ಮುಂಬೈನಲ್ಲಿ ಕಾಂಗ್ರೆಸ್ ಬಲಗೊಂಡರೆ ಮಾತ್ರ ರಾಷ್ಟ್ರಮಟ್ಟದಲ್ಲಿ ಪಕ್ಷ ಬಲಿಷ್ಠವಾಗಲು ಸಾಧ್ಯ. ಪಕ್ಷವನ್ನು ಪುನರ್ ಸಂಘಟಿಸುವ ಭಾರಿ ಸವಾಲು ನಗರ ಘಟಕದ ಹೆಗಲಿಗಿದೆ. ಪಕ್ಷ ಬಲಪಡಿಸುವುದು ಮುಂಬೈನಲ್ಲಿರುವ ಪ್ರತಿಯೊಬ್ಬ ಕಾರ್ಯಕರ್ತರ ಜವಾಬ್ದಾರಿಯಾಗಿದೆ' ಎಂದು ಖರ್ಗೆ ಹೇಳಿದರು.
'1885ರ ಡಿಸೆಂಬರ್ 28ರಂದು ಇಲ್ಲಿ ಪಕ್ಷ ಸ್ಥಾಪನೆ ಮಾಡಿದಾಗಿನಿಂದ ಮುಂಬೈ ಮತ್ತು ಕಾಂಗ್ರೆಸ್ ನಡುವೆ ಹಳೆಯ ಸಂಬಂಧವಿದೆ. ಉದ್ಯೋಗ ಖಾತ್ರಿ ಯೋಜನೆಯಂತಹ ಹಲವು ನಿರ್ಧಾರಗಳನ್ನು ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಕಾಯ್ದೆ ರೂಪದಲ್ಲಿ ಅಂಗೀಕರಿಸುವ ಮೊದಲು ಮಹಾರಾಷ್ಟ್ರದಲ್ಲಿ ಇದನ್ನು ರೂಪಿಸಲಾಗಿತ್ತು' ಎಂದು ಅವರು ಹೇಳಿದರು.
'ನೀವು ಇತಿಹಾಸ ಮರೆತರೆ, ಭವಿಷ್ಯದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಪಕ್ಷವು ದೇಶಕ್ಕಾಗಿ ಏನು ಮಾಡಿದೆ ಎಂಬುದನ್ನು ಹೊಸ ಪೀಳಿಗೆಗೆ ತಿಳಿಸುವುದು ಎಲ್ಲರ ಜವಾಬ್ದಾರಿ' ಎಂದು ತಿಳಿಸಿದರು.
'1989ರಿಂದ ಗಾಂಧಿ ಕುಟುಂಬದ ಯಾವೊಬ್ಬ ಸದಸ್ಯರು ಸಚಿವ, ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗಿ ಅಧಿಕಾರ ನಡೆಸಿಲ್ಲ. ಆದರೆ, ಬಿಜೆಪಿಯು, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ನಿಂದಿಸುವುದರಲ್ಲಿ ತೊಡಗಿದೆ. ಅಲ್ಲದೆ, ದೇಶದ ಪ್ರಗತಿಯ ಶ್ರೇಯವನ್ನು ತನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ' ಎಂದು ಟೀಕಿಸಿದರು.
ನಿರುದ್ಯೋಗವು ದೇಶ ಎದುರಿಸುತ್ತಿರುವ ದೊಡ್ಡ ಸವಾಲು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸಮೃದ್ಧಿ ತಂದಿರುವುದಾಗಿ ಭಾವಿಸಿದ್ದಾರೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಯುಪಿಎ ಆಡಳಿತಾವಧಿಯಲ್ಲಿ ರಚಿಸಲಾದ ಸ್ವಸಹಾಯ ಗುಂಪುಗಳೊಂದಿಗೆ (ಎಸ್‌ಎಚ್‌ಜಿ) ಕಾಂಗ್ರೆಸ್ ಕಾರ್ಯಕರ್ತರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸ್ವಸಹಾಯ ಸಂಘಗಳ ಕಿರು ಆರ್ಥಿಕ ನಿರ್ವಹಣೆ ಮಹಿಳೆಯರ ಏಳಿಗೆಗೆ ಸಹಕಾರಿಯಾಗಿದೆ ಎಂದರು.