ನವದೆಹಲಿ: 'ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಭಾರತೀಯ ಮುಸ್ಲಿಮರ ಪೌರತ್ವದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಹೀಗಾಗಿ ಅವರು ಚಿಂತಿಸುವ ಅಗತ್ಯವಿಲ್ಲ' ಎಂದು ಗೃಹ ಸಚಿವಾಲಯ ಮಂಗಳವಾರ ತಿಳಿಸಿದೆ.
'ಈ ಕಾಯ್ದೆಯು ಭಾರತೀಯ ನಾಗರಿಕರಿಗೆ ತನ್ನ ಪೌರತ್ವ ಸಾಬೀತುಪಡಿಸಲು ಯಾವುದೇ ದಾಖಲೆ ನೀಡುವಂತೆ ಕೇಳುವುದಿಲ್ಲ' ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
'ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ಕಿರುಕುಳದಿಂದಾಗಿ ಇಸ್ಲಾಂನ ಹೆಸರು ವಿಶ್ವದಾದ್ಯಂತ ಕೆಟ್ಟದಾಗಿ ಬಿಂಬಿತವಾಯಿತು. ಆದರೆ ಇಸ್ಲಾಂ ಶಾಂತಿಯು ಧರ್ಮವಾಗಿದ್ದು, ದ್ವೇಷ, ಹಿಂಸೆ, ಧಾರ್ಮಿಕ ನೆಲೆಯಲ್ಲಿ ಯಾವುದೇ ಕಿರುಕುಳವನ್ನು ಎಂದಿಗೂ ಬೋಧಿಸುವುದಿಲ್ಲ ಅಥವಾ ಸೂಚಿಸುವುದಿಲ್ಲ' ಎಂದು ಪ್ರಕಟಣೆ ತಿಳಿಸಿದೆ.
'ಇಸ್ಲಾಂ ಅನ್ನು ಶೋಷಣೆಯ ಹೆಸರಿನಲ್ಲಿ ಕಳಂಕಗೊಳಿಸದಂತೆ ಈ ಕಾಯ್ದೆಯು ರಕ್ಷಿಸುತ್ತದೆ' ಎಂದು ಅದು ತಿಳಿಸಿದೆ.
ಗಡೀಪಾರು ಕುರಿತು ವ್ಯವಹರಿಸಲ್ಲ:
'ಭಾರತವು ವಲಸಿಗರಿಗೆ ಸಂಬಂಧಿಸಿದಂತೆ ಆ ಮೂರು ದೇಶಗಳೊಂದಿಗೆ ಯಾವುದೇ ಒಪ್ಪಂದ ಹೊಂದಿಲ್ಲ. ಹೀಗಾಗಿ ವಲಸಿಗರನ್ನು ಆ ದೇಶಗಳಿಗೆ ಹಿಂದಕ್ಕೆ ಕಳುಹಿಸಲು ಆಗುವುದಿಲ್ಲ' ಎಂದಿರುವ ಗೃಹ ಸಚಿವಾಲಯವು 'ಸಿಎಎ, ಅಕ್ರಮ ವಲಸಿಗರ ಗಡೀಪಾರು ಕುರಿತು ವ್ಯವಹರಿಸುವುದಿಲ್ಲ' ಎಂದೂ ಹೇಳಿದೆ.
'ಹೀಗಿರುವಾಗ ಪೌರತ್ವ ತಿದ್ದುಪಡಿ ಕಾಯ್ದೆಯು ಮುಸ್ಲಿಂರ ವಿರುದ್ಧವಾಗಿದೆ ಎಂದು ಮುಸ್ಲಿಮರು ಮತ್ತು ಕೆಲ ವಿದ್ಯಾರ್ಥಿಗಳು ಭಾವಿಸಿರುವುದು ಅಸಮರ್ಥನೀಯ' ಎಂದು ಅದು ತಿಳಿಸಿದೆ.
ಅದಾಗ್ಯೂ, ಪೌರತ್ವ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಭಾರತೀಯ ಪೌರತ್ವ ಪಡೆಯಲು ವಿಶ್ವದ ಯಾವುದೇ ಭಾಗದ ಮುಸ್ಲಿಮರಿಗೆ ನಿರ್ಬಂಧವಿಲ್ಲ ಎಂದು ಸಚಿವಾಲಯ ಹೇಳಿದೆ.
ಪ್ರಧಾನಿ ಗೌರವಿಸಿದ್ದಾರೆ (ಹೈದರಾಬಾದ್ ವರದಿ):
ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ, ಬೌದ್ಧ, ಸಿಖ್, ಜೈನ ಮತ್ತು ಕ್ರೈಸ್ತ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವ ಮೂಲಕ ಅವರನ್ನು ಗೌರವಿಸಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದರು.
ಬಿಜೆಪಿ ಸಾಮಾಜಿಕ ಮಾಧ್ಯಮ ಸ್ವಯಂ ಸೇವಕರ ಸಭೆಯಲ್ಲಿ ಮಾತನಾಡಿದ ಅವರು, 'ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯದ ಕಾರಣಕ್ಕೆ ಕಾಂಗ್ರೆಸ್ ಪಕ್ಷವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ವಿರೋಧಿಸುತ್ತಿದೆ' ಎಂದು ಆರೋಪಿಸಿದರು.
'ನಾವು ಸಿಎಎ ತರತ್ತೇವೆ ಎಂದು ಹೇಳಿದ್ದೆವು. ಕಾಂಗ್ರೆಸ್ ಇದನ್ನು ವಿರೋಧಿಸಿತ್ತು. ಬಾಂಗ್ಲಾದೇಶ, ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದವರಿಗೆ ಪೌರತ್ವ ನೀಡಬೇಕು ಎಂಬುದು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಮತ್ತು ಸಂವಿಧಾನ ರಚನಾಕಾರರ ಭರವಸೆಯಾಗಿತ್ತು. ಆದರೆ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯದ ಕಾರಣ ಕಾಂಗ್ರೆಸ್ ಸಿಎಎಯನ್ನು ವಿರೋಧಿಸುತ್ತಿದೆ' ಎಂದು ಅಮಿತ್ ಶಾ ಹೆಳಿದರು.
ವಿದ್ಯಾರ್ಥಿಗಳ ಪ್ರತಿಭಟನೆ
ಇಲ್ಲಿನ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಗುಂಪು ಸಿಎಎ ಅನುಷ್ಠಾನ ವಿರೋಧಿಸಿ ಮಂಗಳವಾರ ಪ್ರತಿಭಟನೆ ನಡೆಸಿತು. ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಪ್ರತಿಭಟನೆನಿರತರು ಆಗ್ರಹಿಸಿದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ವಿದ್ಯಾರ್ಥಿಗಳು ಸಿಎಎ ವಿರೋಧಿಸಿ ನಾಲ್ಕು ವರ್ಷಗಳ ಹಿಂದೆ ನಡೆಸಿದ ಪ್ರತಿಭಟನೆ ವೇಳೆ ಬಂಧಿಸಲಾಗಿರುವ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕು ಮತ್ತು ಅವರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ನಡೆಯುವ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ಜಮಾಯಿಸಿದ್ದರು. ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು 'ದೆಹಲಿ ಪೊಲೀಸ್ ವಾಪಸ್ ಜಾವೊ' ಎಂಬ ಘೋಷಣೆಗಳನ್ನು ಕೂಗಿದರು. ದೆಹಲಿ ಪೊಲೀಸರು ಅರೆಸೇನಾ ಪಡೆ ಸಿಬ್ಬಂದಿಯನ್ನು ವಿಶ್ವವಿದ್ಯಾಲಯದ ಬಳಿ ನಿಯೋಜಿಸಿದ್ದು ಪರಿಸ್ಥಿತಿಯ ಮೇಲೆ ನಿಗಾವಹಿಸಲು ಪೊಲೀಸರು ಡ್ರೋನ್‌ಗಳನ್ ಬಳಸಿದೆ. 50 ವಿದ್ಯಾರ್ಥಿಗಳ ಬಂಧನ: ಸಿಎಎ ಅನುಷ್ಠಾನ ವಿರೋಧಿಸಿ ದೆಹಲಿ ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಪ್ರತಿಭಟನೆ ನಡೆಸಲು ಎಐಎಸ್‌ಎ ಕರೆ ನೀಡಿದ ಬೆನ್ನಲ್ಲೇ ದೆಹಲಿ ಪೊಲೀಸರು 50 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಪ್ರತಿಭಟನೆ ಆರಂಭಕ್ಕೂ ಮುನ್ನವೇ ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದ್ದು ನಂತರ ಬಿಡುಗಡೆ ಮಾಡುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ. ಶಾಹೀನ್ ಬಾಗ್ ನಿವಾಸಿಗಳಲ್ಲಿ ಅನಿಶ್ಚಿತತೆ
ನವದೆಹಲಿ: ಸಿಎಎ ವಿರೋಧಿಸಿ 2019-20ರಲ್ಲಿ ಸುಮಾರು 100 ದಿನಗಳವರೆಗೆ ಪ್ರತಿಭಟನೆಗಳು ನಡೆದಿದ್ದ ಆಗ್ನೇಯ ದೆಹಲಿಯ ಶಾಹೀನ್ ಬಾಗ್ ಪ್ರದೇಶದ ನಿವಾಸಿಗಳಲ್ಲಿ ಭಯ ಅನಿಶ್ಚಿತತೆ ಆವರಿಸಿದೆ. ಈ ಪ್ರದೇಶದಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು ಸುಮಾರು 500 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಸಿಎಎ ಅನುಷ್ಠಾನವು ಮುಸ್ಲಿಮರ ಮೇಲೆ ಪರಿತಿಕೂಲ ಪರಿಣಾಮ ಬೀರಬಹುದು ಎಂಬುದಾಗಿ ಇಲ್ಲಿನ ಜನರು ಭಾವಿಸಿದ್ದಾರೆ. ಆದರೆ ಈ ಕುರಿತು ಬಹಿರಂಗವಾಗಿ ಪ್ರತಿಕ್ರಿಯಿಸಲು ಬಹುತೇಕರು ನಿರಾಕರಿಸುತ್ತಿದ್ದಾರೆ. ರಂಜಾನ್‌ನ ಮೊದಲ ದಿನದಂದು ಪ್ರದೇಶವು ಶಾಂತಿಯುತವಾಗಿತ್ತು. ಮಧ್ಯಾಹ್ನ ಪ್ರಾರ್ಥನೆಗಾಗಿ ಜನರು ಸ್ಥಳೀಯ ಮಸೀದಿಯತ್ತ ಸಾಗುತ್ತಿದ್ದದ್ದು ಕಂಡು ಬಂದಿತು. 'ರಂಜಾನ್ ಪ್ರಾರಂಭವಾಗಿದೆ. ಎಲ್ಲರೂ ಸಿದ್ಧತೆಯಲ್ಲಿ ತೊಡಗಿದ್ದೇವೆ. ಆದರೆ ಈ ಹಿಂದೆ ನಾವು ಮಾಡಿದ್ದ ಹೋರಾಟಗಳು ವ್ಯರ್ಥವಾಯಿತಲ್ಲ ಎಂಬ ಕೋಪ ಮತ್ತು ವೇದನೆ ಬಹುತೇಕರ ಹೃದಯಗಳಲ್ಲಿದೆ. ರಂಜಾನ್ ಮಾಸ ಆಗಿಲ್ಲದಿದ್ದರೆ ನಾವು ಪುನಃ ಪ್ರತಿಭಟಿಸುತ್ತಿದ್ದೆವು' ಎಂದು ಹೆಸರೇಳಲು ಬಯಸದ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದರು.
'ನಾನೇ ರಾಜೀನಾಮೆ ನೀಡುತ್ತೇನೆ'
ಗುವಾಹಟಿ: ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ (ಎನ್‌ಆರ್‌ಸಿ) ಅರ್ಜಿ ಸಲ್ಲಿಸದ ವ್ಯಕ್ತಿಯೊಬ್ಬರು ಪೌರತ್ವ ಪಡೆದರೆ ರಾಜೀನಾಮೆ ನೀಡುವ ಮೊದಲ ವ್ಯಕ್ತಿ ನಾನೇ ಆಗಿರುತ್ತೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ತಿಳಿಸಿದ್ದಾರೆ. ಶಿವಸಾಗರ ಜಿಲ್ಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು 'ಸಿಎಎ ಜಾರಿಯಾದರೆ ಬಾಂಗ್ಲಾದೇಶದಿಂದ ಲಕ್ಷಾಂತರ ಹಿಂದೂಗಳು ರಾಜ್ಯಕ್ಕೆ ಬರುತ್ತಾರೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. ಒಂದು ವೇಳೆ ಹಾಗೇನಾದರೂ ಸಂಭವಿಸಿದರೆ ನಾನು ಮೊದಲು ಪ್ರತಿಭಟಿಸುತ್ತೇನೆ' ಎಂದರು.
ಈಶಾನ್ಯ ರಾಜ್ಯಗಳಿಗೆ ಸಿಎಎ ವಿನಾಯಿತಿ
: ಸಂವಿಧಾನದ 6ನೇ ಪರಿಚ್ಛೇದಡಿ ವಿಶೇಷ ಸ್ಥಾನಮಾನ ಪಡೆದಿರುವ ಪ್ರದೇಶಗಳು ಒಳಗೊಂಡಂತೆ ಈಶಾನ್ಯ ರಾಜ್ಯಗಳಲ್ಲಿನ ಬುಡಕಟ್ಟು ಪ್ರದೇಶಗಳನ್ನು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)-2019ರ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಕಾಯ್ದೆಯ ಪ್ರಕಾರ್ 'ಇನ್ನರ್‌ಲೈನ್ ಪರ್ಮಿಟ್' (ಐಎಲ್‌ಪಿ) ವ್ಯವಸ್ಥೆ ಹೊಂದಿರುವ ಅರುಣಾಚಲ ಪ್ರದೇಶ ನಾಗಾಲ್ಯಾಂಡ್ ಮಿಜೋರಾಂ ಮತ್ತು ಮಣಿಪುರ ರಾಜ್ಯಗಳಲ್ಲಿ ಸಿಎಎ ಅನ್ವಯಿಸುವುದಿಲ್ಲ. ಈ ರಾಜ್ಯಗಳಿಗೆ ಭೇಟಿ ನೀಡಲು ಬಯಸುವವರು ರಾಜ್ಯ ಸರ್ಕಾರದಿಂದ ವಿಶೇಷ ಅನುಮತಿ ಪಡೆಯಬೇಕು ಎಂಬ ನಿಯಮ ಇದೆ. ಅಸ್ಸಾಂ ಮೇಘಾಲಯ ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿನ ಬುಡಕಟ್ಟು ಪ್ರದೇಶಗಳಿಗೆ ಸಿಎಎ ವ್ಯಾಪ್ತಿಯಿಂದ ವಿನಾಯಿತಿ ನೀಡಲಾಗಿದೆ.
ಕೋಲ್ಕತ್ತದಲ್ಲಿ ನಡೆದ ಪ್ರತಿಭಟನಾ ರ್‍ಯಾಲಿ ವೇಳೆ ಪ್ರತಿಭಟನಾಕಾರರ ಸಿಎಎ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು -ಎಎಫ್‌ಪಿ ಚಿತ್ರ