ಕಾಸರಗೋಡು: ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದ ಕಾಸರಗೋಡು ಹಳೇ ಸೂರ್ಲು ಮದ್ರಸಾ ಶಿಕ್ಷಕ, ಮೂಲತ: ಕೊಡಗು ನಿವಾಸಿ ಮಹಮ್ಮದ್ ರಿಯಾಸ್ ಮೌಲವಿ(28)ಕೊಲೆ ಪ್ರಕರಣದ ಎಲ್ಲ ಮೂರು ಮಂದಿ ಆರೋಪಿಗಳನ್ನು ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.
ಕಾಸರಗೋಡು ಕೇಳುಗುಡ್ಡೆ ನಿವಾಸಿಗಳಾದ ಅಜೇಶ್ ಅಲಿಯಾಸ್ ಅಪ್ಪು(20), ಕೇಳುಗುಡ್ಡೆ ಗಂಗೆ ಕುಟೀರದ ಅಖಿಲೇಶ್ ಅಲಿಯಾಸ್ ಅಖಿಲ್(25) ಹಾಗೂ ಕೇಳುಗುಡ್ಡೆ ನಿವಾಸಿ ನಿತಿನ್(19)ಖುಲಾಸೆಗೊಂಡವರು. ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಕೆ ಬಾಲಕೃಷ್ಣನ್ ತೀರ್ಪು ಪ್ರಕಟಿಸಿದರು. ತೀರ್ಪು ಹೊರಬೀಳುತ್ತಿದ್ದಂತೆ ತಮಗೆ ನ್ಯಾಯ ಲಭಿಸಿಲ್ಲ ಎಂಬುದಾಗಿ ರಿಯಾಸ್ ಮೌಲವಿ ಪತ್ನಿ ಸೈದಾ ಪ್ರತಿಕ್ರಿಯಿಸಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಕಣ್ಣೂರು ಜಿಲ್ಲೆಯ ಅಂದಿನ ಕ್ರೈಂ ಬ್ರಾಂಚ್ ಎಸ್.ಪಿ ಡಾ. ಎ. ಶ್ರೀನಿವಾಸ್ ಕೊಲೆಪ್ರಕರಣದ ತನಿಖೆ ನಡೆಸಿ, 2017 ಜೂನ್ ತಿಂಗಳಲ್ಲಿ ಆರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಕಳೆದ ಏಳು ವರ್ಷ ಏಳು ದಿವಸಗಳಿಂದ ಮೂರೂ ಮಂದಿ ಆರೋಪಿಗಳು ಜೈಲಿನಲ್ಲಿ ಕಳೆಯುತ್ತಿದ್ದಾರೆ. ರಿಯಾಸ್ ಮೌಲವಿ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಪ್ರತ್ಯೇಕ ಕ್ರಿಯಾ ಸಮಿತಿಯನ್ನೂ ರಚಿಸಲಾಗಿತ್ತು.
2017 ಮಾ 20ರಂದು ರಾತ್ರಿ ಹಳೇ ಸೂರ್ಲು ಸನಿಹದ ಮದ್ರಸಾದ ಕೊಠಡಿಯಲ್ಲಿ ತಂಗಿದ್ದ ಮಹಮ್ಮದ್ ರಿಯಾಸ್ ಮೌಲವಿ ಅವರನ್ನು ತಂಡವೊಂದು ಬರ್ಬರವಾಗಿ ಕೊಲೆ ನಡೆಸಿತ್ತು. ವಿಚಾರಣೆ ವೇಳೆ ಪ್ರೋಸಿಕ್ಯೂಶನ್ ಪರವಾಗಿ 97ಮಂದಿಯಿಂದ ಸಾಕ್ಷಿ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕೇಳುಗುಡ್ಡೆ ನಿವಾಸಿಗಳಾದ ಅಜೇಶ್ ಕೇಳುಗುಡ್ಡೆ ಗಂಗೆ ಕುಟೀರದ ಅಖಿಲೇಶ್ ಹಾಗೂ ಕೇಳುಗುಡ್ಡೆ ನಿವಾಸಿ ನಿತಿನ್ ಎಂಬವರನ್ನು ಅಂದೇ ಪೊಲೀಸರು ಬಂಧಿಸಿದ್ದರು. 2019ರಲ್ಲಿ ಕೊಲೆ ಪ್ರಕರಣದ ವಿಚಾರಣೆ ಆರಂಭಗೊಂಡಿದ್ದು, ನಂತರ ವಿವಿಧ ಕಾರಣಗಳಿಂದ ವಿಚಾರಣೆ ಮುಂದೂಡುತ್ತಾ ಬರಲಾಗಿತ್ತು.
ಕೊಲೆಗೆ ಬಳಸಲಾದ ಆಯುಧಗಳೊಂದಿಗೆ 45 ವಸ್ತು ಪುರಾವೆ ಸೇರಿದಂತೆ 215ಪುರಾವೆಗಳನ್ನು ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರ ಜತೆಗೆ ವೈಜ್ಞಾನಿಕ ಹಾಗೂ ಇತರ ಹಲವು ಪುರಾವೆಗಳನ್ನೂ ಒದಗಿಸಲಾಗಿತ್ತು.
ಭಾರೀ ಪೊಲೀಸ್ ಬಂದೋಬಸ್ತ್:
ಮಹಮ್ಮದ್ ರಿಯಾಸ್ ಮೌಲವಿ ಕೊಲೆ ಪ್ರಕರಣದ ತೀರ್ಪು ಶನಿವಾರ ಪ್ರಕಟಪಡಿಸುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದಕ್ಕಾಗಿ ರಜೆಯಲ್ಲಿದ್ದ ಪೊಲೀಸರನ್ನು ಜಿಲ್ಲಾ ಪೊಲೀಸ್ ಅಧಿಕಾರಿ ನಿರ್ದೇಶದನ್ವಯ ತುರ್ತಾಗಿ ಸೇವೆಗೆ ಕರೆಸಿಕೊಳ್ಳಲಾಗಿತ್ತು. ಚುನಾವಣಾ ಕರ್ತವ್ಯ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ್ದ ಸಶಸ್ತ್ರ ಪೊಲೀಸ್ ಪಡೆಯನ್ನೂ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.