ಕೋಲ್ಕತ್ತ: ಪೂರ್ವ ಪಶ್ಚಿಮ ಮೆಟ್ರೊ ಕಾರಿಡಾರ್‌ನ ಭಾಗವಾಗಿ ಸುಮಾರು ₹120 ಕೋಟಿ ವೆಚ್ಚದಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ ನದಿಯ ಅಡಿಯಲ್ಲಿ ಭಾರತದ ಮೊದಲ ನೀರೊಳಗಿನ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. ನೀರೊಳಗಿನ 520 ಮೀಟರ್ ಉದ್ಧದ ಈ ಮಾರ್ಗವನ್ನು ಪ್ರಯಾಣಿಕರು ಕಣ್ಣುರೆಪ್ಪೆ ಮುಚ್ಚಿ ತೆಗೆಯುವುದರೊಳಗೆ ಅಂದರೆ ಕೇವಲ 45 ಸೆಕೆಂಡುಗಳಲ್ಲಿ ಮೆಟ್ರೊ ರೈಲು ದಾಟಿ ಹೋಗಲಿದೆ.
ಈ ಸುರಂಗ ಮಾರ್ಗವನ್ನು ಇದೇ 6ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ತಿಳಿಸಿದ್ದಾರೆ.
ಯುರೋಸ್ಟಾರ್‌ನ ಲಂಡನ್-ಪ್ಯಾರಿಸ್ ಕಾರಿಡಾರ್‌ನ ರೀತಿಯೇ ಭಾರತದ ಈ ಸುರಂಗ ಮಾರ್ಗವು ನದಿಪಾತ್ರದಿಂದ 13 ಮೀಟರ್ ಕೆಳಗೆ ಮತ್ತು ನೆಲದ ಮಟ್ಟದಿಂದ 33 ಮೀಟರ್ ಕೆಳಗೆ ನಿರ್ಮಾಣವಾಗಿದೆ. ಕೋಲ್ಕತ್ತದ ಪೂರ್ವದಲ್ಲಿ ಸಾಲ್ಟ್ ಲೇಕ್ ಸೆಕ್ಟರ್ ವಿನ ಐಟಿ ತಾಣದಿಂದ ಪಶ್ಚಿಮದಲ್ಲಿ ಹೌರಾ ಮೈದಾನದವರೆಗೆ 520 ಮೀಟರ್ ಉದ್ದದ ಸುರಂಗವು ನದಿಗೆ ಅಡ್ಡಲಾಗಿ ಹಾದುಹೋಗಿದೆ.
'ಸುರಂಗದ ನಿರ್ಮಾಣವು ಪೂರ್ಣಗೊಂಡಿದೆ. ಪೂರ್ವ ಪಶ್ಚಿಮ ಕಾರಿಡಾರ್‌ಗೆ ಈ ಸುರಂಗವು ಅತ್ಯಗತ್ಯ ಮತ್ತು ಪ್ರಮುಖವಾದುದು. ಹೌರಾ ಮತ್ತು ಸೀಲ್ದಾ ನಡುವಿನ ಈ ಮೆಟ್ರೊ ಮಾರ್ಗವು ರಸ್ತೆಯ ಮೂಲಕ ಸಂಚರಿಸಬೇಕಿದ್ದ ಒಂದೂವರೆ ಗಂಟೆಗಳ ಪ್ರಯಾಣದ ಸಮಯವನ್ನು 40 ನಿಮಿಷಗಳಿಗೆ ಇಳಿಸಿದೆ. ಇದು ಎರಡೂ ಕಡೆಗಳಲ್ಲಿ ದಟ್ಟಣೆಯನ್ನು ಸಹ ತಗ್ಗಿಸಲಿದೆ' ಎಂದು ಕೋಲ್ಕತ್ತ ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ (ಸಿವಿಲ್) ಸೈಲೇಶ್ ಕುಮಾರ್ ಹೇಳಿದ್ದಾರೆ.
ಏರಿದ ವೆಚ್ಚ: ಅಧಿಕಾರಿಗಳ ಮಾಹಿತಿ ಪ್ರಕಾರ, ಮೆಟ್ರೊ ರೈಲಿನ ಪೂರ್ವ ಪಶ್ಚಿಮ ಕಾರಿಡಾರ್ ವಿಳಂಬದಿಂದಾಗಿ ವೆಚ್ಚವು ಹೆಚ್ಚಳವಾಗಿದೆ. ₹4,875 ಕೋಟಿ ವೆಚ್ಚದ ಈ ಯೋಜನೆಗೆ 2009ರಲ್ಲಿ ಅನುಮೋದನೆ ನೀಡಲಾಗಿತ್ತು. 2015ರ ಆಗಸ್ಟ್‌ನಲ್ಲಿ ಪೂರ್ಣವಾಗಬೇಕಿತ್ತು. ಕಾಲಮಿತಿಯಲ್ಲಿ ಮುಗಿಯದೆ, ವೆಚ್ಚವು ಈಗ ₹8,475 ಕೋಟಿಗೆ ಏರಿದೆ. ಇದರಲ್ಲಿ ಈಗಾಗಲೇ ₹8,383 ಕೋಟಿ ಖರ್ಚಾಗಿದೆ.
ಸಾವಿರ ಅಮೃತ್ ಭಾರತ್ ರೈಲುಗಳ ತಯಾರಿಕೆ: ವೈಷ್ಣವ್
ದೇಶವು ಮುಂಬರುವ ವರ್ಷಗಳಲ್ಲಿ ಹೊಸ ತಲೆಮಾರಿನ ಸುಮಾರು 1 ಸಾವಿರ ಅಮೃತ ಭಾರತ ರೈಲುಗಳನ್ನು ತಯಾರಿಸಲಿದ್ದು ಈಗ ಗಂಟೆಗೆ 250 ಕಿಲೊ ಮೀಟರ್ ವೇಗದಲ್ಲಿ ಚಲಿಸುವ ರೈಲುಗಳ ತಯಾರಿಕೆಯ ಕೆಲಸ ನಡೆಯುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದರು.
ಪಿಟಿಐ ವಿಡಿಯೋಗಳಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಚಿವ ವೈಷ್ಣವ್ ಅವರು ರೈಲ್ವೆ ಈಗಾಗಲೇ ವಂದೆ ಭಾರತ್ ರೈಲುಗಳನ್ನು ರಫ್ತು ಮಾಡುವ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದೆ. ಮುಂಬರುವ ಐದು ವರ್ಷಗಳಲ್ಲಿ ದೇಶವು ರೈಲುಗಳ ಮೊದಲ ರಫ್ತು ಮಾಡಲಿದೆ ಎಂದು ಹೇಳಿದರು.
ಮೋದಿ ನೇತೃತ್ವದ ಸರ್ಕಾರವು ಕಳೆದ 10 ವರ್ಷಗಳಲ್ಲಿ ರೈಲ್ವೆ ವಲಯದಲ್ಲಿ ಕೈಗೊಂಡ ಸುಧಾರಣ ಉಪಕ್ರಮಗಳ ಕುರಿತು ಮಾತನಾಡಿದ ಅವರು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಚೆನಾಬ್ ಸೇತುವೆ ಮತ್ತು ಕೋಲ್ಕತ್ತ ಮೆಟ್ರೊಗಾಗಿ ಹೂಗ್ಲಿ ನದಿಯ ನೀರಿನಡಿ ನಿರ್ಮಿಸಿರುವ ಮೊದಲ ಸುರಂಗ ಮಾರ್ಗವು ರೈಲ್ವೆ ವಲಯದಲ್ಲಿ ಆಗಿರುವ ಪ್ರಮುಖ ತಾಂತ್ರಿಕ ಪ್ರಗತಿಗಳಾಗಿವೆ ಎಂದರು.
'ರೈಲ್ವೆಗೆ ಬಹುದೊಡ್ಡ ಸಾಮಾಜಿಕ ಹೊಣೆ ಇದೆ. ದಿನಕ್ಕೆ ಸರಾಸರಿ ಎರಡೂವರೆ ಕೋಟಿ ಜನರಿಗೆ ರೈಲು ಸಂಚಾರ ಸೇವೆ ಒದಗಿಸಲಾಗುತ್ತಿದೆ. ಒಬ್ಬ ಪ್ರಯಾಣಿಕರಿಗೆ ಪ್ರಯಾಣ ವೆಚ್ಚ ₹100 ಆಗುತ್ತಿದ್ದು ಇದರಲ್ಲಿ ಪ್ರತಿ ಪ್ರಯಾಣಿಕ ₹45 ವೆಚ್ಚ ಭರಿಸಿದರೆ ನಾವು ಶೇ 55 ರಿಯಾಯಿತಿ ನೀಡುತ್ತಿದ್ದೇವೆ' ಎಂದು ಹೇಳಿದರು.
'ನಾವು ಅಮೃತ್ ಭಾರತ್ ಅನ್ನು ವಿಶ್ವದರ್ಜೆಯ ರೈಲಿನಂತೆ ವಿನ್ಯಾಸಗೊಳಿಸಿದ್ದೇವೆ. ಈ ರೈಲುಗಳಲ್ಲಿ ₹454ಕ್ಕೆ 1000 ಕಿ.ಮೀ. ಪ್ರಯಾಣ ಮಾಡಬಹುದಾಗಿದ್ದು ಪ್ರಯಾಣ ದರ ಕೈಗೆಟುಕುವ ದರದಲ್ಲಿದೆ. ವಂದೆ ಭಾರತ್ ಯುವಜನರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಪ್ರಾಯೋಗಿಕವಾಗಿ ಪ್ರತಿ ವಾರ ಒಂದು ವಂದೆ ಭಾರತ್ ರೈಲು ಸೇವೆಗೆ ಸೇರ್ಪಡೆ ಮಾಡಲಾಗುತ್ತಿದೆ. ಮುಂಬರುವ ಕೆಲವು ವರ್ಷಗಳಲ್ಲಿ ನಾವು ಇಂತಹ 400 ರಿಂದ 500 ರೈಲುಗಳನ್ನು ತಯಾರಿಸಲಿದ್ದೇವೆ' ಎಂದು ಅವರು ಹೇಳಿದರು.