ಬೀಜಿಂಗ್: ಅರುಣಾಚಲ ಪ್ರದೇಶದ ಮೇಲಿನ ತನ್ನ ಹಕ್ಕನ್ನು ಪುನರುಚ್ಚರಿಸಿರುವ ಚೀನಾ ಮಿಲಿಟರಿಯು, ಈ ಪ್ರದೇಶವು ಚೀನಾದ ಅವಿಭಾಜ್ಯ ಅಂಗ ಎಂದು ಮತ್ತೆ ಪ್ರತಿಪಾದಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದಕ್ಕೆ ಬೀಜಿಂಗ್ ಆಕ್ಷೇಪ ವ್ಯಕ್ತಪಡಿಸಿತ್ತು.
'ಝಾಂಗ್ನಾನ್‌ನ (ಟಿಬೆಟ್‌ಗೆ ಚೀನಾ ಇಟ್ಟಿರುವ ಹೆಸರು) ದಕ್ಷಿಣ ಭಾಗ (ಅರುಣಾಚಲ ಪ್ರದೇಶ) ಚೀನಾದ ಭೂ ಪ್ರದೇಶದ ಅವಿಭಾಜ್ಯ ಅಂಗ. ಅದನ್ನು ಭಾರತ ಅಕ್ರಮವಾಗಿ ತನ್ನದೆಂದು ಹೇಳುತ್ತಿದೆ. ಅದನ್ನು ಚೀನಾ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಮತ್ತು ಬಲವಾಗಿ ವಿರೋಧಿಸುತ್ತದೆ' ಎಂದು ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ಜಾಂಗ್ ಕ್ಸಿಯೋಗಾಂಗ್ ಹೇಳಿದ್ದಾರೆ.
ಚೀನಾ ರಕ್ಷಣಾ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ವರದಿಯ ಪ್ರಕಾರ, ಅರುಣಾಚಲ ಪ್ರದೇಶದ ಸೆಲಾ ಸುರಂಗದ ಮೂಲಕ ಭಾರತವು ತನ್ನ ಸೇನಾ ಸನ್ನದ್ಧತೆಯನ್ನು ಹೆಚ್ಚಿಸಿದ್ದಕ್ಕೆ ಜಾಂಗ್ ಪ್ರತಿಕ್ರಿಯಿಸಿದ್ದಾರೆ.
ಅರುಣಾಚಲ ಪ್ರದೇಶವನ್ನು 'ದಕ್ಷಿಣ ಟಿಬೆಟ್' ಎಂದು ಚೀನಾ ಪ್ರತಿಪಾದಿಸುತ್ತದೆ. ಅಲ್ಲದೆ ಅಲ್ಲಿಗೆ ತನ್ನ ಹಕ್ಕುಗಳನ್ನು ಎತ್ತಿಹಿಡಿಲು ಭಾರತೀಯ ನಾಯಕರು ಭೇಟಿ ನೀಡಿದಾಗೆಲ್ಲ ಚೀನಾ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ದಾಖಲಿಸುವುದನ್ನು ವಾಡಿಕೆ ಮಾಡಿಕೊಂಡಿದೆ.
ಭಾರತವು ಅರುಣಾಚಲ ಪ್ರದೇಶದ ಮೇಲೆ ಚೀನಾದ ಹಕ್ಕುಗಳನ್ನು ಪದೇ ಪದೇ ತಿರಸ್ಕರಿಸಿದೆ. ಅಲ್ಲದೆ ರಾಜ್ಯವು ದೇಶದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿಕೊಂಡು ಬಂದಿದೆ. ಈ ಪ್ರದೇಶಕ್ಕೆ ಅನ್ಯ ಹೆಸರುಗಳನ್ನು ಇಡುವ ಬೀಜಿಂಗ್ ಕ್ರಮವನ್ನೂ ನವದೆಹಲಿ ವಿರೋಧಿಸಿದೆ. ಅಲ್ಲದೆ ಬೀಜಿಂಗ್‌ನ ಈ ವರ್ತನೆಗಳು ವಾಸ್ತವವನ್ನು ಬದಲಾಯಿಸುವುದಿಲ್ಲ ಎಂದೂ ಹೇಳಿದೆ.