ನಿಮಗೊಂದು ಒಳ್ಳೆಯ ಶೂ ಬೇಕು, ಅದರ ಖರೀದಿಗೆ ಆಸಕ್ತಿ ತೋರಿಸಿ ನೀವು ಬ್ರೌಸರ್‌ನಲ್ಲಿ ಗೂಗಲ್ ಸರ್ಚ್ ಎಂಜಿನ್ ಮೂಲಕ ಜಾಲಾಡುತ್ತೀರಿ. ನಿಮಗೆ ಬೇಕಾದ ಮಾಹಿತಿ ಸಿಕ್ಕ ಬಳಿಕ ನೀವು ಬ್ರೌಸರ್ ಮುಚ್ಚುತ್ತೀರಿ. ಮುಂದಿನ ಬಾರಿ ನಿಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಅಥವಾ 'ಎಕ್ಸ್' (ಟ್ವಿಟರ್) ತೆರೆಯುತ್ತೀರಿ.
ನೀವು ಶೂ ಖರೀದಿಸಬೇಕೆಂದಿದ್ದೀರಿ ಎನ್ನುವುದು ಈ ಜಾಲತಾಣಗಳಿಗೆ ಹೇಗೆ ಗೊತ್ತಾಯಿತು? ಹೀಗೆಂದು ಚಕಿತರಾಗಿದ್ದೀರಾ? ಇದು ಕುಕೀಗಳ (Cookies) ಕರಾಮತ್ತು.
ಏನಿವು ಕುಕೀಗಳು?
ಇದೇನೂ ಬಿಸ್ಕತ್ತಲ್ಲ; ಆದರೆ ಬಿಸ್ಕತ್ತು ನೀಡಿ ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ವಿವಿಧ ವಾಣಿಜ್ಯ ಕಂಪನಿಗಳಿಗೆ ನೆರವಾಗುತ್ತವೆ ಇವು. ತಂತ್ರಜ್ಞಾನದ ಪರಿಭಾಷೆಯಲ್ಲಿ ಕುಕೀಗಳು ಎಂದರೆ ಬಳಕೆದಾರರ ದತ್ತಾಂಶವನ್ನು ಫೈಲ್ ರೂಪದಲ್ಲಿ ಸಂಗ್ರಹಿಸುವ ವ್ಯವಸ್ಥೆ. ಕಂಪನಿಗಳು ಕುಕೀಗಳನ್ನು ಇರಿಸಿ, ಅವುಗಳಲ್ಲಿ ಲಭ್ಯವಾಗುವ ದತ್ತಾಂಶವನ್ನು ಸಂಗ್ರಹಿಸುತ್ತವೆ. ಬ್ರೌಸರ್‌ನಲ್ಲಿ ನೀವು ಯಾವುದಾದರೂ ಜಾಲತಾಣಗಳಿಗೆ ಲಾಗ್ ಇನ್ ಆಗಿದ್ದರೆ, ಸ್ವಯಂಚಾಲಿತವಾಗಿ ನಿಮ್ಮ ವಿವರಗಳನ್ನು ಈ ಕುಕೀಗಳು ಬ್ರೌಸರ್‌ನ ಕ್ಯಾಶ್ (Cache) ಮೆಮೊರಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಉದಾಹರಣೆಗೆ, ನಿಮ್ಮ ಲಾಗಿನ್ ಹೆಸರು, ಪಾಸ್‌ವರ್ಡ್, ಅದಕ್ಕೆ ಸಂಬಂಧಿಸಿದ ಫೋನ್ ನಂಬರ್, ಇಮೇಲ್ ವಿಳಾಸ, ಯಾವ ಸ್ಥಳದಿಂದ ಲಾಗಿನ್ ಆಗಿದ್ದೀರಿ, ನೀವು ಯಾವುದೆಲ್ಲಾ ವೆಬ್ ಸೈಟುಗಳಿಗೆ ಭೇಟಿ ನೀಡುತ್ತೀರಿ? ಅಂತರ್ಜಾಲದಲ್ಲಿ ನಿಮ್ಮ ಆಸಕ್ತಿಯೇನು? ನೀವು ನೋಡುವ ವಿಡಿಯೊಗಳು ಯಾವುವು? ನಿಮಗೆ ಶೈಕ್ಷಣಿಕ ತಾಣಗಳು ಇಷ್ಟವೋ, ಸುದ್ದಿ ಜಾಲತಾಣಗಳೋ, ಆರೋಗ್ಯಕ್ಕೆ ಸಂಬಂಧಿಸಿದವುಗಳೋ ಅಥವಾ ಜ್ಯೋತಿಷ್ಯದಲ್ಲಿ ನಿಮಗೆ ಆಸಕ್ತಿಯಿದೆಯೋ? ಅಥವಾ ಪೋರ್ನ್ ಸೈಟುಗಳು ನಿಮಗಿಷ್ಟವೋ ಎಂಬುದನ್ನೂ ಈ ಕುಕೀಗಳು ಟ್ರ್ಯಾಕ್ ಮಾಡುತ್ತವೆ. ಎಂದರೆ ಅಂತರ್ಜಾಲದಲ್ಲಿ ನಮ್ಮ ಚಟುವಟಿಕೆಗಳೆಲ್ಲವೂ ಟ್ರ್ಯಾಕ್ ಆಗುತ್ತವೆ.ಈ ಕುಕೀಗಳನ್ನು ಬಳಸಿ, ನಿಮ್ಮ ಆಸಕ್ತಿಗೆ ಅನುಗುಣವಾಗಿ ಕಂಪನಿಗಳು ಸಂಬಂಧಿತ ಜಾಹೀರಾತನ್ನು ನಿಮಗಾಗಿ ತಳ್ಳುತ್ತವೆ. ಇದರ ಪರಿಣಾಮವಾಗಿಯೇ, ನಿಮ್ಮನ್ನು ಇಂಟರ್‌ನೆಟ್ ಸುಲಭವಾಗಿ ಅರ್ಥ ಮಾಡಿಕೊಳ್ಳುವುದು!
ಕುಕೀಗಳ ಬಗ್ಗೆ ಈಗ ಯಾಕೆ ಮಾತು?
ಸುಮಾರು ಮೂರು ದಶಕಗಳಿಂದ ನಮ್ಮ ಇಂಟರ್ನೆಟ್ ಜೀವನದ ಅವಿಭಾಜ್ಯ ಅಂಗವಾಗಿದ್ದ ಕುಕೀಗಳಿಗೆ ತಂತ್ರಜ್ಞಾನ ದಿಗ್ಗಜ ಸಂಸ್ಥೆ ಗೂಗಲ್ ಈಗ ಕಡಿವಾಣ ಹಾಕಲು ಹೊರಟಿದೆ. ಈಗಾಗಲೇ ಹಲವಾರು ಜಾಲತಾಣಗಳನ್ನು ತೆರೆದಾಗ 'ಕುಕೀಗಳನ್ನು ಅನುಮತಿಸಿ' ಎಂಬರ್ಥದ ಪಾಪ್-ಅಪ್ ವಿಂಡೋ ಹೆಚ್ಚಿನವರಿಗೆ ಕಾಣಿಸಿದೆ. ಬಳಕೆದಾರರ ಹಿತದೃಷ್ಟಿಯಿಂದ, ಖಾಸಗಿತನದ ರಕ್ಷಣೆಗಾಗಿ ಹಂತಹಂತವಾಗಿ ಕುಕೀಗಳನ್ನು ನಿವಾರಿಸಲಾಗುತ್ತಿದ್ದು, 2024 ಅಂತ್ಯದೊಳಗೆ ತನ್ನ ಬ್ರೌಸರ್ ತಂತ್ರಾಂಶವಾಗಿರುವ ಕ್ರೋಮ್‌ನಲ್ಲಿ ಡೀಫಾಲ್ಟ್ ಆಗಿ ಕುಕೀಗಳು ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಎಂದು ಗೂಗಲ್ ಹೇಳಿಕೊಂಡಿದೆ. ಇತರ ಪ್ರಮುಖ ಬ್ರೌಸರುಗಳಾದ ಮೋಜಿಲ್ಲಾದ ಫೈರ್‌ಫಾಕ್ಸ್ 2019ರಲ್ಲಿ ಹಾಗೂ ಆಯಪಲ್‌ನ ಸಫಾರಿ 2020ರಲ್ಲಿ ಕುಕೀಗಳಿಗೆ ಕಡಿವಾಣ ಹಾಕಿದ್ದವು. ಆದರೆ ಗೂಗಲ್‌ನ ಕ್ರೋಮ್ ಬ್ರೌಸರ್ ಹೆಚ್ಚು ಜನಪ್ರಿಯ. ಭಾರತದಲ್ಲಿ ಶೇ. 88 ಮಂದಿ ಹಾಗೂ ಜಗತ್ತಿನಾದ್ಯಂತ ಶೇ. 64 ಮಂದಿ ವೆಬ್ ಜಾಲಾಟಕ್ಕೆ ಇದೇ ಬ್ರೌಸರ್ ಅವಲಂಬಿತರಾಗಿದ್ದಾರೆ ಎನ್ನುತ್ತದೆ 'ಸಿಮಿಲರ್‌ವೆಬ್' ಜಾಲತಾಣದ ವರದಿ. ಕಳೆದ ಜನವರಿ 4ರಂದು ಶೇ.1ರಷ್ಟು ಬಳಕೆದಾರರ ಜಾಡು (ಟ್ರ್ಯಾಕ್) ಹಿಡಿಯದಂತೆ ಕುಕೀಗಳಿಗೆ ನಿರ್ಬಂಧ ವಿಧಿಸಿತ್ತು. ಜಾಗತಿಕವಾಗಿ 300 ಕೋಟಿಗೂ ಹೆಚ್ಚು ಬಳಕೆದಾರರು ಕ್ರೋಮ್ ಬಳಸುತ್ತಿದ್ದು, 2024ರ ಉತ್ತರಾರ್ಧದಲ್ಲಿ ಎಲ್ಲ ಬಳಕೆದಾರರಿಗೂ ಡೀಫಾಲ್ಟ್ ಕುಕೀಗಳನ್ನು ತಡೆಯಲಾಗುತ್ತದೆ.
ಯಾರಿಗೆ ಸಮಸ್ಯೆ?
ಎಲ್ಲಕ್ಕೂ ಮಿಗಿಲಾಗಿ, ಜಾಹೀರಾತು ಉದ್ಯಮಕ್ಕಿದು ದೊಡ್ಡ ಸವಾಲು. ಅಂತರ್ಜಾಲ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದೆ ಮತ್ತು ಡಿಜಿಟಲ್ ಜಾಹೀರಾತು ಉದ್ಯಮವೂ ಬೃಹತ್ತಾಗಿ ಬೆಳೆಯುತ್ತಿದೆ. ಬಹುತೇಕ ಕುಕೀಗಳ ಆಧಾರದಲ್ಲೇ ಡಿಜಿಟಲ್ ಜಾಹೀರಾತು ಲೋಕ ನಿಂತಿದ್ದು, ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಕುಕೀಗಳಲ್ಲಿ ಬಳಕೆದಾರರ ಮಾಹಿತಿ ದೊರಕುತ್ತದೆ ಮತ್ತು ಇದನ್ನು ಅವಲಂಬಿಸಿಯೇ ಜಾಹೀರಾತುಗಳನ್ನು ಅವರು ನೋಡುವ ಪುಟಗಳಿಗೆ ತಳ್ಳಲಾಗುತ್ತದೆ. ಕುಕೀಗಳಿಲ್ಲದಿದ್ದರೆ ಕಂಪನಿಗಳಿಗೆ ಬಳಕೆ ದಾರರ ಮಾಹಿತಿ ಸುಲಭವಾಗಿ ದೊರೆಯಲಾರದು. ಕಂಪನಿಗಳು, ಜಾಹೀರಾತುದಾರರು ಅಥವಾ ವೆಬ್ ಸೈಟುಗಳು ಬಳಕೆದಾರರನ್ನು ಸೆಳೆಯಬೇಕಿದ್ದರೆ ಇನ್ನು ಮುಂದೆ ತಮ್ಮದೇ ತಾಣದಲ್ಲಿ ಸೈನ್-ಇನ್ ಆಗುವುದನ್ನು ಕಡ್ಡಾಯಗೊಳಿಸಬೇಕಾಗಬಹುದು. ಸುಲಭವಾಗಿ ನಮ್ಮ ಮಾಹಿತಿಯು ಬೇರೊಬ್ಬರಿಗೆ ಸಿಗುವಂತಿಲ್ಲ ಎಂಬುದು ನಮಗೆ ಖುಷಿಯ ವಿಚಾರವಾದರೆ, ಜಾಲತಾಣ ಬಳಸಬೇಕಿದ್ದರೆ 'ಸೈನ್ ಇನ್' ಆಗಲೇಬೇಕಾಗಬಹುದು ಎಂಬ ಆತಂಕವೂ ಇದ್ದೇ ಇದೆ. ಜೊತೆಗೆ, ಅವರಿಗಿಷ್ಟ ವಿಲ್ಲದ, ಆಸಕ್ತಿಯಿಲ್ಲದ ಜಾಹೀರಾತುಗಳೂ ಕಾಣಿಸಿ ಕೊಳ್ಳಬಹುದು.
ಗೂಗಲ್‌ನಿಂದ ಪರಿಹಾರ
ಹೀಗೆಂದು, ಕುಕೀಗಳಿಗೆ ಗೂಗಲ್ ಸಂಪೂರ್ಣ ನಿಷೇಧ ಹೇರಿದೆ ಎಂದೇನಿಲ್ಲ. ಡೀಫಾಲ್ಟ್ ಆಗಿ ಬಳಕೆದಾರರ ಮಾಹಿತಿ ಸಂಗ್ರಹಿಸುವುದಕ್ಕೆ ಕುಕೀಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ ಅಷ್ಟೆ. ಬಳಕೆದಾರರಿಗೆ ಅಗತ್ಯವಿದೆಯೆಂದಾದರೆ ಅಥವಾ ಥರ್ಡ್-ಪಾರ್ಟಿ ಕುಕೀಗಳಿಲ್ಲದೆ ಜಾಲತಾಣವು ಸರಿಯಾಗಿ ತೆರೆಯುವುದಿಲ್ಲ ಎಂದಾದರೆ ಮತ್ತು ಆಗಾಗ್ಗೆ ಲಾಗಿನ್ ಆಗುವಂತಹ ಸೈಟುಗಳಿಗಾಗಿ, ಗೂಗಲ್ ತನ್ನ ಕ್ರೋಮ್ ಬ್ರೌಸರಿನಲ್ಲೊಂದು ಸ್ವಿಚ್ ಒದಗಿಸಿದೆ. ಅದನ್ನು ಸ್ಲೈಡ್ ಮಾಡಿದರೆ, ತಾತ್ಕಾಲಿಕವಾಗಿ ಕುಕೀಗಳನ್ನು ಅನುಮತಿಸಬಹುದು.