ನವದೆಹಲಿ: ನಿನ್ನೆ ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಸಂದೇಶ್ಖಾಲಿ ಸಂತ್ರಸ್ತರಲ್ಲಿ ಒಬ್ಬರಾದ ರೇಖಾ ಪಾತ್ರಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಬುಧವಾರ ಬಂಗಾಳದ ಕೃಷ್ಣನಗರ ಬಿಜೆಪಿ ಅಭ್ಯರ್ಥಿ ರಾಜಮಾತಾ ಅಮೃತಾ ರಾಯ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ.
ದೇಶಾದ್ಯಂತ ನಡೆದ ವಿವಿಧ ದಾಳಿಗಳಲ್ಲಿ ಇಡಿ ವಶಪಡಿಸಿಕೊಂಡ ಸುಮಾರು 3000 ಕೋಟಿ ರೂ. ಅನ್ನು ವಿವಿಧ ಯೋಜನೆಗಳ ಮೂಲಕ ಬಡ ಜನರಿಗೆ ನೀಡುವುದಾಗಿ ರಾಜ್ಯದ ಜನತೆಗೆ ತಿಳಿಸುವಂತೆ ಅಮೃತಾ ರಾಯ್ ಅವರಿಗೆ ಹೇಳಿದ್ದಾರೆ.
ಕೃಷ್ಣನಗರ ಕ್ಷೇತ್ರದಲ್ಲಿ ಟಿಎಂಸಿ ನಾಯಕ ಹಾಗೂ ಮಾಜಿ ಸಂಸದ ಮಹುವಾ ಮೊಯಿತ್ರಾ ವಿರುದ್ಧ ರಾಜಮಾತಾ ಅಮೃತಾ ರಾಯ್ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.
ಅಭ್ಯರ್ಥಿಯೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಮೋದಿ ಅವರು, ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಿದ ನಂತರ ಇಡಿಯಿಂದ ಪಡೆದ ಹಣವನ್ನು ಬಡ ಜನರಿಗೆ ನೀಡಲು ಕಾನೂನು ರೂಪಿಸುವ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಗ್ಗೆ ಪ್ರತಿಪಕ್ಷಗಳು ಏನು ಹೇಳುತ್ತವೆ ಎಂಬುದರ ಬಗ್ಗೆ ನಿರಾಶೆಗೊಳ್ಳಬೇಡಿ ಎಂದು ಸಲಹೆ ನೀಡಿದ ಪ್ರಧಾನಿ, ರಾಜಕೀಯವನ್ನು ಈಗ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ - ಒಂದು ಬಿಜೆಪಿ ನೇತೃತ್ವದಲ್ಲಿ, ಇದು ದೇಶದಲ್ಲಿ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕಲು ಬದ್ಧವಾಗಿದೆ ಮತ್ತು ಇನ್ನೊಂದು ಭ್ರಷ್ಟರನ್ನು ಬೆಂಬಲಿಸುವ ಇಂಡಿಯಾ ಮೈತ್ರಿಕೂಟ ಮತ್ತು ಟಿಎಂಸಿ ಎಂದು ಪ್ರಧಾನಿ ಹೇಳಿದ್ದಾರೆ.
ಕೃಷ್ಣನಗರದ ಕ್ಷೇತ್ರವನ್ನು ಗೆದ್ದ ನಂತರ ಶೀಘ್ರದಲ್ಲೇ ಅಲ್ಲಿ ಮಾಡಬೇಕಾದ ಕಾರ್ಯಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಪ್ರಧಾನಿ ಮೋದಿ ಅವರು ರಾಯ್ ಗೆ ಸೂಚಿಸಿದ್ದಾರೆ.