ನವದೆಹಲಿ: ಭಾರತೀಯ ನೌಕಾಪಡೆ ಅಧಿಕಾರಿಗಳು 35 ಸೊಮಾಲಿಯಾ ಕಡಲ್ಗಳ್ಳರನ್ನು ಶನಿವಾರ ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ ವಾರ ಸೊಮಾಲಿಯಾ ಕಡಲ್ಗಳ್ಳರು ಬಲ್ಗೇರಿಯಾದ ಹಡಗನ್ನು ಅಪಹರಿಸಿದ್ದರು. ಇದರಲ್ಲಿ ಭಾರತೀಯರು ಸೇರಿದಂತೆ ಬಲ್ಗೇರಿಯಾದ ಪ್ರಜೆಗಳಿದ್ದರು.
ಭಾರತೀಯ ನೌಕಾಪಡೆಯು ಈ ಹಡಗಿನ ನೆರವಿಗೆ ಐಎನ್‌ಎಸ್ ಕೋಲ್ಕತ್ತ ನೌಕೆಯನ್ನು ರವಾನಿಸಿತ್ತು. ನಂತರ ಯಶಸ್ವಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಣೆ ಮಾಡಿ, 35 ಜನ ಸೊಮಾಲಿಯಾ ಕಡಲ್ಗಳ್ಳರನ್ನು ಬಂಧಿಸಿತ್ತು.
ಕೆಂಪು ಸಮುದ್ರ ಪ್ರದೇಶದಲ್ಲಿ ಹುಥಿ ಬಂಡುಕೋರರು, ಸೊಮಾಲಿಯಾ ಕಡಲ್ಗಳ್ಳರು ಸರಕು ಸಾಗಣೆ ಹಡಗುಗಳ ಮೇಲೆ ಈಚಿನ ದಿನಗಳಲ್ಲಿ ದಾಳಿ ನಡೆಸುತ್ತಿದ್ದಾರೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ. ಈಚಿನ ವಾರಗಳಲ್ಲಿ ಭಾರತೀಯ ನೌಕಾಪಡೆಯು ದಾಳಿಗೆ ಗುರಿಯಾದ ಹಲವು ಹಡಗುಗಳಿಗೆ ನೆರವಿನ ಹಸ್ತ ಚಾಚಿದೆ.